ಬೆಳಗಾವಿ: ಕೊರೊನಾ ಸಂಕಷ್ಟ ಮತ್ತು ಪ್ರವಾಹಕ್ಕೆ ನಲುಗಿರುವ ನೇಕಾರ ಸಮುದಾಯದ ಶೇ.80ರಷ್ಟು ಕುಟುಂಬಗಳು ಆರ್ಥಿಕ ಸಮಸ್ಯೆಯಿಂದ ಬೀದಿಗೆ ಬಂದಿವೆ. ದುಡಿಯಲು ಉದ್ಯೋಗವಿಲ್ಲದೇ, ಲಕ್ಷಾಂತರ ಬಂಡವಾಳ ಹಾಕಿ ತಯಾರಿಸಿದ ಸೀರೆಗಳು ಮಾರಾಟವಾಗದೇ ಸಾಲದ ಸುಳಿಯಲ್ಲಿ ಸಿಲುಕಿ ನರಳಾಡುತ್ತಿದ್ದಾರೆ.
ಲಾಕ್‌ಡೌನ್ ಎಫೆಕ್ಟ್: ಮದುವೆ ಸೀಜನ್ ಬಂದ್:
ಮಾರ್ಚ್ನಿಂದ ಮೇ ವರೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಮದುವೆ ಸಮಾರಂಭಗಳು ಪ್ರಾರಂಭವಾಗುತ್ತವೆ. ಆದರೆ, ಸರ್ಕಾರದ ಕೊರೊನಾ ಲಾಕ್‌ಡೌನ್ ನಿಯಮಾವಳಿಯಂತೆ ಸರಳವಾಗಿ ಮದುವೆಗಳು ನಡೆಯುತ್ತಿವೆ. ಹೀಗಾಗಿ ಕಳೆದ ಎರಡೂವರೆ ವರ್ಷಗಳಿಂದ ನೇಕಾರರು ತಯಾರಿಸಿದ ಸೀರೆಗಳು ದೊಡ್ಡ ಪ್ರಮಾಣದಲ್ಲಿ ಮಾರಾಟವಾಗದೇ ಹಾಗೆಯೇ ಉಳಿದುಕೊಂಡಿವೆ. ಸೀರೆಗಳು ಮಾರಾಟವಾಗದೇ ಇರೋದ್ರಿಂದ ಹಾಕಿದ ಬಂಡವಾಳವೂ ಕೈಗೆ ಸಿಗದೇ, ಸೂಕ್ತ ವ್ಯಾಪಾರವು ಆಗದೇ ನೇಕಾರರು ಪರದಾಡುವಂತಾಗಿದೆ.
ಮಗ್ಗಗಳ ಅಂಕಿ-ಅಂಶಗಳನ್ನು ನೀಡುವಲ್ಲಿ ಅಧಿಕಾರಿಗಳು ವಿಫಲ:
2ನೇ ಬಾರಿಯ ಲಾಕ್‌ಡೌನ್ ವೇಳೆ ಸಂಕಷ್ಟದಲ್ಲಿ ಇರೋ ನೇಕಾರರಿಗೆ ಸರ್ಕಾರ ಪ್ಯಾಕೆಜ್ ಘೋಷಿಸಿತ್ತು. ಕೈಮಗ್ಗ ಹಾಗೂ ಜವಳಿ ಇಲಾಖೆಯ ಮಾಹಿತಿ ಪ್ರಕಾರ ರಾಜ್ಯದಲ್ಲಿ ಅಂದಾಜು 2 ಲಕ್ಷಕ್ಕೂ ಅಧಿಕ ನೇಕಾರರಿದ್ದಾರೆ. ಆದರೆ, ರಾಜ್ಯ ಸರ್ಕಾರದ 59 ಸಾವಿರ ಜನ ನೇಕಾರರಿಗೆ ಪರಿಹಾರ ಘೋಷಣೆ ಮಾಡಿದೆ. ಇದು ಬಡ ನೇಕಾರರಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಕೈ ಸೇರದ 3 ಸಾವಿರ ರೂ. ಪರಿಹಾರ ಧನ:
ಕೊರೊನಾ ಕಾರಣಕ್ಕೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ನೇಕಾರರಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರ 3 ಸಾವಿರ ಪರಿಹಾರ ಘೋಷಿಸಿತ್ತು. ಸರ್ಕಾರ ನೀಡಿದ್ದ ಭರವಸೆಯೂ ಮರೀಚಿಕೆಯಾಗಿದ್ದು, ಈವರೆಗೆ ಯಾರಿಗೂ ಪರಿಹಾರ ಸಿಕ್ಕಿಲ್ಲವಂತೆ.
26 ಜನ ನೇಕಾರರ ಸಾವು:
ಆರ್ಥಿಕ ಸಂಕಷ್ಟ ಸೇರಿದಂತೆ ಸಾಲ, ಉದ್ಯೋಗದಲ್ಲಿ ನಷ್ಟ ಹೀಗೆ ಅನೇಕ ಕಾರಣಗಳಿಂದ ರಾಜ್ಯದಲ್ಲಿ ಈವರೆಗೆ 21ಕ್ಕೂ ಹೆಚ್ಚು ನೇಕಾರರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರಲ್ಲಿ ಇಬ್ಬರಿಗೆ ಮಾತ್ರ ರಾಜ್ಯ ಸರ್ಕಾರ ತಲಾ 2ಲಕ್ಷ ರೂಪಾಯಿ ಪರಿಹಾರ ಕೊಟ್ಟಿದೆ. ಉಳಿದ ಕುಟುಂಬಗಳು ಪರಿಹಾರಕ್ಕಾಗಿ ಇಂದಿಗೂ ಕಚೇರಿಗಳಿಗೆ ಓಡಾಡೋದು ಮಾತ್ರ ತಪ್ಪುತ್ತಿಲ್ಲ.