ಬೆಳಗಾವಿ:ಕೆಪಿಟಿಸಿಎಲ್ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದಲ್ಲಿ ಬಂಧಿತರಾಗಿರುವ ಐವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಅಲ್ಲದೇ, ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಬೆಳಗಾವಿ ಜಿಲ್ಲಾ ಪೊಲೀಸರು ಬಂಧಿಸಿದ್ದು, ಈ ಸಂಖ್ಯೆ 14ಕ್ಕೇರಿದೆ.
ಗೋಕಾಕ ತಾಲೂಕು ನಾಗನೂರು ಗ್ರಾಮದ ಸಿದ್ಧಪ್ಪ ಮದಿಹಳ್ಳಿ, ಮಾಲದಿನ್ನಿಯ ಸುನೀಲ್ ಭಂಗಿ, ರೇಣುಕಾ ಜವಾರಿ, ವೀರನಗದ್ದಿ ಗ್ರಾಮದ ಸಂತೋಷ್ ಮಾನಗಾಂವಿ, ಬೈಲಹೊಂಗಲ ತಾಲೂಕಿನ ಬೆನಚಿನಮರಡಿ ಗ್ರಾಮದ ಸಿದ್ದಪ್ಪ ಕೊತ್ತಲ ಸಲ್ಲಿಸಿದ್ದ ಜಾಮೀನು ಅರ್ಜಿಗಳ ವಿಚಾರಣೆ ನಡೆಸಿದ ಗೋಕಾಕ್ನ 12ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಎಲ್ಲ ಅರ್ಜಿಗಳನ್ನು ತಿರಸ್ಕರಿಸಿತು.
ಕೆಪಿಟಿಸಿಎಲ್ ನೇಮಕಾತಿ ಪರೀಕ್ಷೆಯಲ್ಲಿ ಸ್ಮಾರ್ಟ್ ವಾಚ್ ಬಳಸಿ ನಕಲಿಗೆ ಪ್ರಯತ್ನಿಸಿದ್ದ ಸಿದ್ದಪ್ಪ ಮದಿಹಳ್ಳಿ ಸೇರಿದಂತೆ 9 ಆರೋಪಿಗಳನ್ನು ಆ.22 ರಂದು ಬೆಳಗಾವಿ ಜಿಲ್ಲಾ ಪೊಲೀಸರು ಬಂಧಿಸಿದ್ದರು. ಆ ಪೈಕಿ ಐವರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಈವರೆಗೆ ತಲೆಮರೆಸಿಕೊಂಡು ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದ ಪ್ರಮುಖ ಆರೋಪಿ ಬೆಳಗಾವಿಯ ಸಂಜೀವ ಭಂಡಾರಿಯ ಜಾಮೀನು ಅರ್ಜಿಯನ್ನೂ ನ್ಯಾಯಾಲಯ ತಿರಸ್ಕರಿಸಿತು. ಆರೋಪಿ ಸಂಜೀವ ಭಂಡಾರಿಯನ್ನು ಸೆ.2ರಂದು ಪೊಲೀಸರು ಬಂಧಿಸಿದ್ದಾರೆ.