ಬೆಳಗಾವಿ:ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿರುವ ಕೊರೊನಾ ರುದ್ರತಾಂಡವ ಹತೋಟಿಗೆ ತರಲು ಜಿಲ್ಲಾಡಳಿತ ಸಾಕಷ್ಟು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಅದಕ್ಕಾಗಿ ಗ್ರಾಮೀಣ ಪ್ರದೇಶಗಳಲ್ಲಿ ಐದಕ್ಕಿಂತ ಹೆಚ್ಚು ಸೋಂಕಿತರಿರುವ ಹಳ್ಳಿಗಳನ್ನು ಸೀಲ್ಡೌನ್ ಮಾಡಲಾಗುತ್ತಿದೆ. ಕರ್ನಾಟಕದ ಎರಡನೇ ರಾಜಧಾನಿ ಆಗಿರುವ ಬೆಳಗಾವಿಯಲ್ಲಿ 18 ತಾಲೂಕುಗಳಿವೆ. 1300ಕ್ಕೂ ಹೆಚ್ಚು ಹಳ್ಳಿಗಳಿದ್ದು, 48ಲಕ್ಷ ಜನರಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಇಡೀ ದೇಶವನ್ನೇ ಕಾಡುತ್ತಿರುವ ಕೊರೊನಾ ಸೋಂಕಿತ ಪ್ರಕರಣಗಳು ನಗರ ಪ್ರದೇಶಗಳಲ್ಲಿ ಕಡಿಮೆ ಆಗುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಹೀಗಾಗಿ ಬೆಳಗಾವಿ ಜಿಲ್ಲೆಯಲ್ಲಿ ಬಿಗಿ ಕ್ರಮಕ್ಕೆ ಮುಂದಾಗಿರುವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗಿರುವ ಹಳ್ಳಿಗಳಲ್ಲಿ ಅಧಿಕಾರಿಗಳ ಪರೇಡ್ ನಡೆಸಿ ಜನರಿಗೆ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಜಿಲ್ಲಾಡಳಿತ,ಪೊಲೀಸ್ ಇಲಾಖೆ ಎಷ್ಟೇ ಕಠಿಣ ಕ್ರಮಕೈಗೊಂಡರೂ ಕೊರೊನಾ ಕಂಟ್ರೋಲ್ಗೆ ಬಾರದ ಹಿನ್ನೆಲೆ ಐದಕ್ಕಿಂತ ಹೆಚ್ಚಿನ ಸೋಂಕಿತರಿರುವ ಪ್ರದೇಶವನ್ನು ಸೀಲ್ಡೌನ್ ಮಾಡಲು ಆದೇಶ ಹೊರಡಿಸಿದ್ದಾರೆ.
ಸೋಂಕು ಹೆಚ್ಚಳಕ್ಕೆ ಜಿಲ್ಲಾಡಳಿತದ ನಿರ್ಲಕ್ಷ್ಯ, ಗ್ರಾಮೀಣ ಜನರ ಬೇಜವಾಬ್ದಾರಿ ಕಾರಣ:
ಬೆಳಗಾವಿ ಜಿಲ್ಲೆಯಲ್ಲಿ 1300ಕ್ಕೂ ಹೆಚ್ಚು ಹಳ್ಳಿಗಳಿವೆ. ಆದ್ರೆ, ಕೊರೊನಾ ಎರಡನೇ ಅಲೆ ಬಂದು ರುದ್ರತಾಂಡವ ಆಡುತ್ತಿದ್ದರೂ ಪ್ರಾರಂಭದಲ್ಲಿ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಲಿಲ್ಲ. ಪರಿಣಾಮ, ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿ ಸಾವಿನ ಪ್ರಮಾಣದ ಜೊತೆಗೆ ಸೋಂಕಿತರ ಸಂಖ್ಯೆಯೂ ಹೆಚ್ಚಾಯ್ತು. ಇದರಿಂದ ನೂರಾರು ಗ್ರಾಮಗಳಲ್ಲಿ ಸೋಂಕಿಗೆ ತುತ್ತಾದ ಜನರು ಅಕ್ಷರಶಃ ನಲುಗಿ ಹೋಗಿದ್ದಾರೆ. ಆರಂಭದಲ್ಲಿ ಜಿಲ್ಲಾಡಳಿತದ ನಿರ್ಲಕ್ಷ್ಯ, ಗ್ರಾಮೀಣ ಜನರ ಬೇಜವಾಬ್ದಾರಿಗೆ ಇದೀಗ ಹಳ್ಳಿ ಹಳ್ಳಿಗಳು ಸಾವಿನೂರಾಗ್ತಿವೆ. ಮನೆ ಮನೆಗೂ ವೈರಸ್ ಎಂಟ್ರಿಯಾಗುತ್ತಿದೆ. ಸದ್ಯ ಗ್ರಾಮಗಳ ಪರಿಸ್ಥಿತಿಯೇ ಜಿಲ್ಲೆಯಲ್ಲಿನ ಕೊರೊನಾ ಎಫೆಕ್ಟ್ ಎಷ್ಟಿದೆ ಅನ್ನುವುದನ್ನ ತೋರಿಸುತ್ತಿದೆ.
ಬೆಳಗಾವಿ ಬಹುತೇಕ ಹಳ್ಳಿಗಳು ಇದೀಗ ಬಿಕೋ ಅಂತಿದ್ದು, ಮನೆಗಳಿಂದ ಹೊರ ಬರಲು ಭಯಪಡುತ್ತಿರುವ ಗ್ರಾಮಸ್ಥರು, ಅಂಗಡಿ ಮುಂಗಟ್ಟು ಬಂದ್ ಮಾಡಿಕೊಂಡು ಮನೆಯಲ್ಲಿದ್ದಾರೆ. ಆದರೂ ಗ್ರಾಮೀಣ ಪ್ರದೇಶಗಳು ಕೊರೊನಾ ಹಾಟ್ಸ್ಪಾಟ್ಗಳಾಗಿ ಮಾರ್ಪಡಾಗುತ್ತಿವೆ.
ಹಳ್ಳಿಗಳಲ್ಲಿ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆ:
ಪ್ರತಿಯೊಂದು ಹಳ್ಳಿಯಲ್ಲೂ ರ್ಯಾಪಿಡ್ ಹಾಗೂ ಆರ್ಟಿ-ಪಿಸಿಆರ್ ಟೆಸ್ಟ್ ಕಡ್ಡಾಯ ಮಾಡಲಾಗಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನು ಹತೋಟಿಗೆ ತರಲು ಜಿಲ್ಲಾಡಳಿತದಿಂದ ಈಗಾಗಲೇ 135 ವೈದ್ಯರು,ಆರೋಗ್ಯ ಇಲಾಖೆ ಸಿಬ್ಬಂದಿಗಳ ತಂಡವನ್ನ ರಚಿಸಿ, ಜಿಲ್ಲೆಯ 1300ಕ್ಕೂ ಹೆಚ್ಚಿನ ಹಳ್ಳಿಗಳಲ್ಲಿ ರ್ಯಾಪಿಡ್ ಆಂಟಿಜೆನ್ ಕೋವಿಡ್ ಟೆಸ್ಟ್ ಪೂರ್ಣಗೊಳಿಸಿದ್ದಾರೆ. ಕೊರೊನಾ ಸೋಂಕಿತ ಪ್ರಕರಣಗಳು ಹಳ್ಳಿಗಳಲ್ಲಿ ಹೆಚ್ಚಾಗಿದೆ. ಹೀಗಾಗಿ ಜಿಲ್ಲಾಡಳಿತದಿಂದ ಸೋಂಕಿತರು ಹೆಚ್ಚಿರುವ ಪ್ರದೇಶವನ್ನು ಕಂಟೋನ್ಮೆಂಟ್ ಜೋನ್ ಮಾಡುವ ಮೂಲಕ ಜನರ ಓಡಾಟಕ್ಕೆ ನಿರ್ಬಂಧ ಹೇರಲಾಗುತ್ತಿದೆ.
ಕೊರೊನಾ ಕಂಟ್ರೋಲ್ ಗೆ ಖುದ್ದು ಫೀಲ್ಡಿಗಿಳಿದ ಜಿಲ್ಲಾಧಿಕಾರಿ
ಬೆಳಗಾವಿ ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಜಿಲ್ಲೆಯಾಗಿರುವ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಅಲ್ಲಿಗೆ ಹೋಗುವುದು ಬರುವುದು ಮಾಡ್ತಾರೆ. ಈ ಕಾರಣಕ್ಕೆ ಸೋಂಕು ಗ್ರಾಮಗಳಲ್ಲಿ ಹೆಚ್ಚಾಗಿ ಹರಡುತ್ತಿದೆ. ಮತ್ತೊಂದೆಡೆ ಸೋಂಕಿಗೆ ತುತ್ತಾದ ಜನರು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಹೋಗುತ್ತಿಲ್ಲ. ಮನೆಯಲ್ಲೇ ಇರುವ ಕಾರಣಕ್ಕೆ ಕೊರೊನಾ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ತಗುಲಿ ಅದು ಇಡೀ ಕುಟುಂಬದ ಸದಸ್ಯರಿಗೆ ಅಂಟಿಕೊಳ್ತಿದೆ. ಸೋಂಕಿತರ ಬೇಜವಾಬ್ದಾರಿಯಿಂದಾಗಿ ಸರಿಯಾಗಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಎಲ್ಲ ಕಡೆಯೂ ಸೋಂಕು ಹರಡುತ್ತಿದೆ. ಇದು ಬೆಳಗಾವಿಯಲ್ಲಿ ಅಷ್ಟೇ ಅಲ್ಲದೇ ಹುಕ್ಕೇರಿ, ಚಿಕ್ಕೋಡಿ, ರಾಯಬಾಗ ತಾಲೂಕಿನ ಹತ್ತಕ್ಕೂ ಅಧಿಕ ಹಳ್ಳಿಗಳಲ್ಲಿಯೂ ಇಂತಹದ್ದೆ ಪರಿಸ್ಥಿತಿ ಇದೆ. ಹೀಗಾಗಿ ಹಳ್ಳಿಗಳಲ್ಲಿ ಕೊರೊನಾ ಕಂಟ್ರೋಲ್ ಮಾಡಲು ಖುದ್ದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಫೀಲ್ಡಿಗಿಳಿದಿದ್ದು, ಅತೀ ಹೆಚ್ಚು ಪಾಸಿಟಿವ್ ಬಂದ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜಾಗೃತಿ ಮೂಡಿಸುವುದರ ಜೊತೆಗೆ ಸೋಂಕಿತರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.
ಐದಕ್ಕಿಂತ ಹೆಚ್ಚಿನ ಸೋಂಕಿತ ಪ್ರಕರಣಗಳು ಪತ್ತೆ, 8ಕ್ಕೂ ಹೆಚ್ಚು ಗ್ರಾಮಗಳು ಸೀಲ್ಡೌನ್
ಸರ್ಕಾರ ಮತ್ತು ಜಿಲ್ಲಾಡಳಿತ ಎಷ್ಟೇ ಜಾಗೃತಿ ಮೂಡಿಸಿದರೂ ಸಾರ್ವಜನಿಕರು ಎಚ್ಚೆತ್ತುಕೊಳ್ಳದ ಪರಿಣಾಮ ಹಳ್ಳಿಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಡಿಸಿ ಮೈಕ್ರೋ ಕಂಟೈನ್ಮೆಂಟ್ ಜೋನ್ ಮಾಡುತ್ತಿದ್ದಾರೆ. ಇದರಿಂದ ಸೋಂಕಿತರ ಸಂಖ್ಯೆ ಇಳಿಮುಖದತ್ತ ಸಾಗುತ್ತಿದೆ. ಹೀಗಾಗಿ ಐದಕ್ಕಿಂತ ಹೆಚ್ಚಿನ ಸೋಂಕಿತ ಪ್ರಕರಣಗಳು ಕಂಡುಬಂದ ತಾಲೂಕಿನ ಬಿ.ಕೆ.ಕಂಗ್ರಾಳಿ, ಹಿಂಡಲಗಾ ಸೇರಿದಂತೆ ನಿನ್ನೆವರೆಗೂ 8 ಹಳ್ಳಿಗಳನ್ನು ಸೀಲ್ಡೌನ್ ಮಾಡಿದ್ದಾರೆ. ಇದಲ್ಲದೇ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಹೆಚ್ಚಿರುವ ಕಾರಣಕ್ಕೆ ಜೂನ್ 14ರ ನಂತರವೂ ಬೆಳಗಾವಿ ಜಿಲ್ಲೆಯಲ್ಲಿ ಒಂದು ವಾರಗಳ ಕಾಲ ಲಾಕ್ಡೌನ್ ಮುಂದುವರೆಸಲಾಗಿದೆ.