ಬೆಳಗಾವಿ:ಕೋವಿಡ್ ವ್ಯಾಕ್ಸಿನ್ ಪಡೆಯಲು ಬೆಳಗಾವಿ ಬಿಮ್ಸ್ ಆವರಣದಲ್ಲಿರುವ ಲಸಿಕಾ ಕೇಂದ್ರಕ್ಕೆ ಬಂದ ಸಾರ್ವಜನಿಕರು ಸಾಲಿನಲ್ಲಿ ನಿಂತು ಪರದಾಡುವಂತಾಗಿದೆ. ಜಿಲ್ಲಾಸ್ಪತ್ರೆ ಸೇರಿದಂತೆ ಜಿಲ್ಲಾದ್ಯಂತ ಒಟ್ಟು 150 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಆದರೆ, ಸೋಮವಾರ ಸಂಜೆಯಿಂದ ಮತ್ತೆ ಕೊರೊನಾ ಲಸಿಕೆಗೆ ಬೆಳಗಾವಿಯಲ್ಲಿ ಹಾಹಾಕಾರ ಶುರುವಾಗಿದೆ. ಸಾರ್ವಜನಿಕರು, ಜಿಲ್ಲಾಸ್ಪತ್ರೆ, ವಂಟಮೂರಿಯಲ್ಲಿರುವ ಲಸಿಕಾ ಕೇಂದ್ರ ಸೇರಿದಂತೆ ಬೆಳಗಾವಿ ತಾಲೂಕಿನಾದ್ಯಂತ ವ್ಯಾಕ್ಸಿನೇಷನ್ಗಾಗಿ ಅಲೆದಾಡುತ್ತಿದ್ದಾರೆ.
ಕೋವಿಡ್ ಅನ್ಲಾಕ್ ಹಂತ ಹಂತವಾಗಿ ಆರಂಭವಾಗುತ್ತಿದ್ದು, ವಿದ್ಯಾರ್ಥಿಗಳು, ಶಾಲಾ ಶಿಕ್ಷಕರಿಗೆ, ಕಾರ್ಮಿಕರಿಗೆ ವ್ಯಾಕ್ಸಿನೇಷನ್ ಕಡ್ಡಾಯಗೊಳಿಸಿರುವ ಹಿನ್ನೆಲೆ, ಬೆಳಗಾವಿ ನಗರದ ಜನರು ಕೊರೊನಾ ಲಸಿಕೆ ಪಡೆಯಲು ಮುಗಿ ಬೀಳುತ್ತಿದ್ದಾರೆ. ಇತ್ತ ವೈದ್ಯರೊಂದಿಗೆ ಸಾರ್ವಜನಿಕರು ವಾಗ್ವಾದ ನಡೆಸಿದ್ದಲ್ಲದೇ, ಕೊರೊನಾ ಭಯವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಇದರಿಂದ ಕೊರೊನಾ ಕಡಿಮೆ ಆಗುವ ಬದಲು ಹೆಚ್ಚಾಗುವ ಭೀತಿ ಎದುರಾಗಿದೆ.