ಬೆಳಗಾವಿ: ಕುಂದಾ ನಗರಿಯಲ್ಲಿ ಮಹಾಮಾರಿ ಕೊರೊನಾ ಅಟ್ಟಹಾಸ ಮುಂದುವರಿಸಿದೆ. ಸರ್ವೇ ಮಾಡಲು ತೆರಳಿದ್ದ 39 ವರ್ಷದ ಅಂಗನವಾಡಿ ಶಿಕ್ಷಕಿಗೂ ಸೋಂಕು ತಗುಲಿದ್ದು, ನಗರದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
ಬೆಳಗಾವಿಯಲ್ಲಿ ಸೋಂಕಿತರ ಸರ್ವೇ ಮಾಡಲು ಹೋದ ಅಂಗನವಾಡಿ ಶಿಕ್ಷಕಿಗೂ ಕೊರೊನಾ!
ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ 128ನೇ ಸೋಂಕಿತ ಯುವಕನ ಜತೆಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದವರ ಸರ್ವೇ ಮಾಡಲು ಹೋಗಿದ್ದ ಅಂಗನವಾಡಿ ಶಿಕ್ಷಕಿಗೆ ಕೊರೊನಾ ಸೋಂಕು ತಗುಲಿ ಆತಂಕ ಸೃಷ್ಟಿಸಿದೆ.
ಹೊರರಾಜ್ಯ ಹಾಗೂ ಹೊರದೇಶಗಳಿಂದ ಬಂದವರ ಮಾಹಿತಿ ಕಲೆ ಹಾಕಲು ಹಾಗೂ ಬಾಣಂತಿಯರಿಗೆ ದಿನಸಿ ನೀಡಲು ಅಂಗನವಾಡಿ ಶಿಕ್ಷಕಿ 94 ಕ್ಕೂ ಅಧಿಕ ಮನೆಗಳಿಗೆ ಭೇಟಿ ನೀಡಿದ್ದರು. ಇದರಿಂದ ಜಿಲ್ಲಾಡಳಿತ ಈ ಎಲ್ಲ ಕುಟುಂಬ ಸದಸ್ಯರ ರಕ್ತಮಾದರಿ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
ತಾಲೂಕಿನ ಹಿರೇಬಾಗೇವಾಡಿ ಗ್ರಾಮದ 128ನೇ ಸೋಂಕಿತ ಗುಣಮುಖನಾಗಿದ್ದು, ಈತನ ದ್ವಿತೀಯ ಸಂಪರ್ಕ ಹೊಂದಿದ್ದ 45 ಮತ್ತು 38 ವರ್ಷದ ಇಬ್ಬರು ಪುರುಷರು, 80 ವರ್ಷದ ವೃದ್ಧೆ, 55 ಮತ್ತು 42 ವರ್ಷದ ಇಬ್ಬರು ಮಹಿಳೆಯರಿಗೆ ಸೋಂಕು ತಗುಲಿದೆ. ಇದರಿಂದ ಸೋಂಕಿತರ ಸಂಖ್ಯೆ 51ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಈವರೆಗೆ ನಾಲ್ವರು ಗುಣಮುಖರಾಗಿದ್ದು, ಓರ್ವ ವೃದ್ಧೆ ಮೃತಪಟ್ಟಿದ್ದಾರೆ. ಸದ್ಯ 46 ಕೊರೊನಾ ಆ್ಯಕ್ಟಿವ್ ಪ್ರಕರಣಗಳಿವೆ. ದೆಹಲಿಯ ಧರ್ಮಸಭೆಯಲ್ಲಿ ಪಾಲ್ಗೊಂಡು ಮರಳಿದ್ದ 20 ವರ್ಷ ವಯಸ್ಸಿನ ಸೋಂಕಿತ ಯುವಕನ ಜತೆಗೆ ಈ 6 ಜನ ದ್ವಿತೀಯ ಸಂಪರ್ಕ ಹೊಂದಿದ್ದರು. ಈ ಎಲ್ಲರೂ ತಾಲೂಕಿನ ಹಿರೇಬಾಗೇವಾಡಿ ಗ್ರಾಮದವರಾಗಿದ್ದಾರೆ.