ಚಿಕ್ಕೋಡಿ :ಕಾಗವಾಡ, ಚಿಕ್ಕೋಡಿ, ಹುಕ್ಕೇರಿ ಹಾಗು ನಿಪ್ಪಾಣಿ ಭಾಗದ ಜನರು ಕೊರೊನಾ ಲ್ಯಾಬ್ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಚಂದ್ರಕಾಂತ ಹುಕ್ಕೇರಿ ಹೇಳಿದ್ದಾರೆ.
ಕೊರೊನಾ ವೈರಸ್ ಸೋಂಕು ಪರೀಕ್ಷೆಗೆ ಜನರ ಪರದಾಟ ಪಟ್ಟಣದಲ್ಲಿ ಈಟಿವಿಗೆ ಪ್ರತಿಕ್ರಿಯಿಸಿದ ಅವರು, ಬೆಳಗಾವಿಯಲ್ಲಿ ಮಾತ್ರ ಕೊರೊನಾ ಟೆಸ್ಟಿಂಗ್ ಲ್ಯಾಬ್ ಇದೆ. ಆದರೆ, ಚಿಕ್ಕೋಡಿ ಉಪವಿಭಾಗದ ಸೋಂಕಿತರ ತಪಾಸಣೆ ಮಾಡಿದ ಬಳಿಕ ಬೆಳಗಾವಿಯಿಂದ ಫಲಿತಾಂಶ ಪಡೆಯಲು ವಿಳಂಬವಾಗುತ್ತಿದೆ. ಇದರಿಂದಾಗಿ ಕೊರೊನಾ ಟೆಸ್ಟ್ಗೆ ಒಳಗಾದ ಜನರು ಫಲಿತಾಂಶ ಬರುವವರೆಗೆ ಹೊಂ ಕ್ವಾರಂಟೈನ್ನಲ್ಲಿ ಇರಬೇಕಾಗಿದೆ ಎಂದರು.
ಮಹಾರಾಷ್ಟ್ರದಲ್ಲಿ ಕೊರೊನಾ ಕೇಸುಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಗಡಿಗೆ ಅಂಟಿಕೊಂಡಿರುವ ನಿಪ್ಪಾಣಿ, ಅಥಣಿ, ಕಾಗವಾಡ ತಾಲೂಕಿನ ಜನರು ಕೊರೊನಾ ತಪಾಸಣೆ ಮಾಡಿಕೊಂಡ ಬಳಿಕ ನಾಲ್ಕೈದು ದಿನ ಕಾಯಬೇಕಾದ ಪ್ರಸಂಗ ಎದುರಾಗಿದೆ.
ಶಾಸಕ ಗಣೇಶ ಹುಕ್ಕೇರಿ ಅವರು ಆರೋಗ್ಯ ಸಚಿವ ಶ್ರೀರಾಮಲು ಅವರನ್ನು ಭೇಟಿಯಾಗಿ ಆದಷ್ಟು ಬೇಗ ಕೊರೊನಾ ಟೆಸ್ಟಿಂಗ್ ಲ್ಯಾಬ್ ಪ್ರಾರಂಭಿಸಿ ಎಂದು ಮನವಿ ಮಾಡಿದ್ದರೂ ಸಹ ಸರ್ಕಾರ ಮಾತ್ರ ಚಿಕ್ಕೋಡಿಯಲ್ಲಿ ಕೊರೊನಾ ಟೆಸ್ಟಿಂಗ್ ಲ್ಯಾಬ್ ಪ್ರಾರಂಭಿಸದೆ ಇರುವುದು ವಿಪರ್ಯಾಸ ಎನ್ನುತ್ತಾರೆ ಇಲ್ಲಿನ ಜನರು.