ಅಥಣಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದರಿದ್ರವಾಗಿವೆ. ಅವುಗಳ ವಿಫಲತೆಯಿಂದ ಕೊರೊನಾ ಹತೋಟಿಗೆ ತರಲಾಗಿಲ್ಲ. ಆದ್ದರಿಂದ ಕಾಂಗ್ರೆಸ್ನಿಂದ ವಿನೂತನ ಆರೋಗ್ಯ ತಪಾಸಣೆ ನಡೆಸಿ, ಜನರ ಜೊತೆ ನಾವಿದ್ದೇವೆ ಎಂಬ ವಿಶ್ವಾಸ ತುಂಬುತ್ತೇವೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ ರಾವ್ ಚಿಂಗಳೆ ಕುಟುಕಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಚಿಂಗಳೆ ಆರೋಪ ಪಟ್ಟಣದ ಶಿವಣಗಿ ಸಂಸ್ಕೃತಿ ಭವನದಲ್ಲಿ ವಿನೂತನ ಆರೋಗ್ಯ ತಪಾಸಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದ ಅವರು, ಕೆಪಿಸಿಸಿಯ ಮಹತ್ವಾಕಾಂಕ್ಷೆಯ ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಜಿಲ್ಲಾ ಪಕ್ಷದ ಕಾರ್ಯಕರ್ತರು ಕೊರೊನಾ ವಾರಿಯರ್ಸ್ಗಳಾಗಿ ಆರೋಗ್ಯ ಹಸ್ತ ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಸಮೀಕ್ಷೆ ಕಾರ್ಯದಲ್ಲಿ ಯಾವುದೇ ಪಕ್ಷ, ಜಾತಿ, ಭಾಷೆ ಇಲ್ಲದೇ, ಪ್ರತಿ ಒಂದು ಮನೆಗೆ ತೆರಳಿ ಜಾಗೃತಿ ಮೂಡಿಸುವ ಜೊತೆಗೆ ಆರೋಗ್ಯ ವಿವರವನ್ನು ನೀಡಬೇಕು ಎಂದು ಕೊರೊನಾ ವಾರಿಯರ್ಸ್ಗಳಿಗೆ ಮಾಹಿತಿ ನೀಡಿದರು.
ಈ ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ 3 ಜನರನ್ನು ಆಯ್ಕೆ ಮಾಡಿದ್ದು, ಅವರಿಗೆ ಆರೋಗ್ಯ ಹಸ್ತದ ಕಿಟ್ಗಳನ್ನು ಹಸ್ತಾಂತರಿಸಲಾಯಿತು.
ಕಿಟ್ಗಳಲ್ಲಿ ಸುರಕ್ಷಿತ ಫೇಸ್ ಮಾಸ್ಕ್, ಸ್ಯಾನಿಟೈಂಜರ್, ದೇಹ ಸುರಕ್ಷಿತ ಬಟ್ಟೆಗಳು, ಹೆಲ್ಮೆಟ್ ಫೇಸ್ ಶೀಲ್ಡ್, ಪಲ್ಸ್ ಮೀಟರ್, ಥರ್ಮಲ್ ಸ್ಕ್ಯಾನರ್, ಹ್ಯಾಂಡ್ ಗ್ಲೋವ್ಸ್ ಮುಂತಾದ ಅವಶ್ಯಕತೆಯ ವಸ್ತುಗಳಿರುತ್ತವೆ. ಇದೊಂದು ವಿಶಿಷ್ಟ ಯೋಜನೆಯಾಗಿದ್ದು ಕ್ಷೇತ್ರದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ತಲಾ ಎರಡು ಜನ ಕೊರೊನಾ ವಾರಿಯರ್ಸ್ಗಳನ್ನು ನಿಯೋಜನೆ ಮಾಡಲಾಗುತ್ತದೆ. ಈ ಕೊರೊನಾ ವಾರಿಯರ್ಸ್ಗಳು ಪ್ರತಿ ಮನೆ, ಮನೆಗೆ ತೆರಳಿ ಕುಟುಂಬದ ಎಲ್ಲ ಸದಸ್ಯರ ತಪಾಸಣೆಗಳೊಂದಿಗೆ ಕೊರೊನಾ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯಾಧಿಕಾರಿಗಳ ಸಲಹೆಗಳನ್ನು ಹಾಗೂ ಮುಂಜಾಗ್ರತೆಯ ಕ್ರಮಗಳನ್ನು ತೆಗೆದುಕೊಳ್ಳುವ ಕುರಿತು ಮಾಹಿತಿ ನೀಡುತ್ತಾರೆ ಎಂದು ಅಥಣಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಮಾಹಿತಿ ನೀಡಿದರು.