ಬೆಳಗಾವಿ :ಕೊರೊನಾ ಕಡಿಮೆಯಾಗಲಿ ಎಂಬ ಕಾರಣಕ್ಕೆ ದೇವರಿಗೆ ಬಿಟ್ಟಿದ್ದ ಕುದುರೆ ಸಾವನ್ನಪ್ಪಿದ ಹಿನ್ನೆಲೆ ಸಾವಿರಾರು ಜನರು ಲಾಕ್ಡೌನ್ ನಿಯಮ ಉಲ್ಲಂಘಿಸಿ ಅಶ್ವ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಘಟನೆ ಜಿಲ್ಲೆಯ ಗೋಕಾಕ್ ತಾಲೂಕಿನಲ್ಲಿ ನಡೆದಿದೆ.
ಗೋಕಾಕ್ ತಾಲೂಕಿನ ಕೊಣ್ಣೂರಿನ ಮರಡಿಮಠಕ್ಕೆ ಮೂರ್ನಾಲ್ಕು ದಿನಗಳ ಹಿಂದೆ ಕೊರೊನಾ ಕಡಿಮೆ ಆಗಲಿ ಎಂಬ ಸಂಕಲ್ಪದೊಂದಿಗೆ ಪವಾಡೇಶ್ವರ ಶ್ರೀಗಳ ಮಾರ್ಗದರ್ಶನದಂತೆ ಕಾಡಸಿದ್ದೇಶ್ವರ ದೇವರಿಗೆ ಶೌರ್ಯ ಎಂಬ ಕುದುರೆ ಬಿಡಲಾಗಿತ್ತು. ನಿನ್ನೆ ರಾತ್ರಿ ಗ್ರಾಮದಲ್ಲಿ ಸಂಚಾರಕ್ಕೆ ಬಿಟ್ಟಿದ್ದ ಅಶ್ವ ಸಾವನ್ನಪ್ಪಿದೆ.
ಮರಡಿಮಠದ ಕುದುರೆ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನ ಭಾಗಿ ಸಾವಿನ ಸುದ್ದಿ ತಿಳಿದು ಮರಡಿಮಠ ಮತ್ತು ಕೊಣ್ಣೂರು ಗ್ರಾಮಸ್ಥರು ಕುದುರೆಯ ಬೃಹತ್ ಅಂತಿಮ ಯಾತ್ರೆ ನಡೆಸಿದರು. ಬಳಿಕ ಅಶ್ವದ ಅಂತ್ಯ ಸಂಸ್ಕಾರ ನೆರವೇರಿಸಿದರು. ಈ ಸಮಯದಲ್ಲಿ ಲಾಕ್ಡೌನ್ ಮಾಯವಾಗಿ, ಕೊರೊನಾ ನಿಯಮ ಉಲ್ಲಂಘನೆಯಾಗಿತ್ತು.
ಸಂಕಷ್ಟ ನಿವಾರಣೆಗೆ ದೈವದ ಮೊರೆ
ಈ ಹಿಂದೆಯೂ ಕೂಡ ಮಲೇರಿಯಾ, ಪ್ಲೇಗ್‍ದಂತಹ ಮಹಾಮಾರಿ ಊರನ್ನ ಕಾಡಿದಾಗ ಕಾಡಸಿದ್ದೇಶ್ವರನಿಗೆ ಕುದುರೆ ನೀಡಲಾಗುತ್ತದೆ. ಮಠದ ಕುದುರೆಯನ್ನು ರಾತ್ರಿ ಗ್ರಾಮದಲ್ಲಿ ಸಂಚಾರಕ್ಕೆ ಬಿಡಲಾಗುತ್ತದೆ.
ಇದರಿಂದ ಗ್ರಾಮಕ್ಕೆ ಅಂಟಿಕೊಂಡಿದ್ದ ರೋಗ, ರುಜಿನಗಳು ನಾಶವಾಗುತ್ತವೆ ಎಂಬುವುದು ಇಲ್ಲಿನ ಜನರ ನಂಬಿಕೆ. ಅದರಂತೆ ಕೊರೊನಾ ನಾಶಕ್ಕೆ ಮೊನ್ನೆ ರಾತ್ರಿ ಬಿಟ್ಟಿದ್ದ ದೈವದ ಕುದುರೆ ಸಾವನ್ನಪ್ಪಿದೆ.
ಮಠ ಸೀಲ್‍ಡೌನ್ ಮಾಡಿದ ತಹಶೀಲ್ದಾರ್ ಸದ್ಯ ಕೊರೊನಾ ಅಟ್ಟಹಾಸದ ಇಂತಹ ಸಂದರ್ಭದಲ್ಲಿ ಸಾವಿರಾರು ಜನರು ಸೇರಿ ಕುದುರೆಯ ಅಂತ್ಯಕ್ರಿಯಲ್ಲಿ ಭಾಗಿಯಾಗಿದ್ದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ. ತಾಲೂಕಾಡಳಿತ ತೀವ್ರ ಟೀಕೆಗೆ ಗುರಿಯಾಗಿದೆ.
ಮರಡಿಮಠವನ್ನ ಸೀಲ್‍ಡೌನ್ ಮಾಡಿದ ಗೋಕಾಕ ತಹಶೀಲ್ದಾರ್:
ಕೋವಿಡ್ ನಿಯಮ ಉಲ್ಲಂಘಿಸಿರುವ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿದ ಗೋಕಾಕ ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ, ಮರಡಿಮಠವನ್ನು ಸೀಲ್‍ಡೌನ್ ಮಾಡಿದ್ದಾರೆ. ಯಾವುದೇ ಭಕ್ತರು ಮಠಕ್ಕೆ ಪ್ರವೇಶ ಮಾಡದಂತೆ ಗ್ರಾಮದ ಮುಖ್ಯ ದ್ವಾರದ ಬಳಿ ಕಟ್ಟಿಗೆಗಳನ್ನ ಕಟ್ಟಿ ಸೀಲ್ ಡೌನ್ ಮಾಡಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಕೊಣ್ಣೂರ ಪಟ್ಟಣದಲ್ಲೂ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಅಂತ್ಯಕ್ರಿಯೆ ಮುಂದಾಳತ್ವ ವಹಿಸಿದ್ದ 15 ಜನರ ಮೇಲೆ ಈಗಾಗಲೇ ಪೊಲೀಸರು ದೂರು ದಾಖಲಿಸಿದ್ದಾರೆ. ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ಪ್ರತಿಯೊಬ್ಬರ ಮಾಹಿತಿ ಪಡೆದುಕೊಂಡು ಕೋವಿಡ್ ತಪಾಸಣೆ ಮಾಡಲಾಗುತ್ತಿದೆ. ಇದರ ಜೊತೆಗೆ ಮನೆಯಿಂದ ಯಾರು ಹೊರ ಬರದಂತೆ ಪೊಲೀಸರು ಸೂಚನೆ ನೀಡುತ್ತಿದ್ದಾರೆ.