ಚಿಕ್ಕೋಡಿ: ಕೊರೊನಾ ಸೋಂಕಿನಿಂದ ಮೃತ ಪಟ್ಟ ವ್ಯಕ್ತಿಗಳ ಶವ ಸಂಸ್ಕಾರಕ್ಕೆ ಸ್ವತಃ ಕುಟುಂಬಸ್ಥರು, ಸಂಬಂಧಿಕರು ಹಿಂಜರಿಯುತ್ತಿರುವ ಪರಿಸ್ಥಿತಿಯಲ್ಲಿ ಏಕತಾ ಫೌಂಡೇಶನ್ ಕೊರೊನಾದಿಂದ ಮೃತಪಟ್ಟವರ ಶವ ಸಂಸ್ಕಾರ ಕಾರ್ಯ ಮಾಡುತ್ತಿದೆ.
ಕೋವಿಡ್ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸ್ತಿದೆ ನಿಪ್ಪಾಣಿ ಏಕತಾ ಫೌಂಡೇಶನ್ - ಕೊರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ
ದೇಶಾದ್ಯಂತ ಪ್ರತಿದಿನ ಸಾವಿರಾರು ರೋಗಿಗಳು ಕೊರೊನಾ ಸೋಂಕಿನಿಂದ ಸಾವನ್ನಪ್ಪುತ್ತಿದ್ದಾರೆ. ಈ ರೋಗಿಗಳ ಶವ ಸಂಸ್ಕಾರ ಮಾಡಲು ಜನ ಹಿಂದೇಟು ಹಾಕುತ್ತಿದ್ದಾರೆ. ಆದರೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನಲ್ಲಿ ಏಕತಾ ಫೌಂಡೇಶನ್ ಕೊರೊನಾದಿಂದ ಮೃತಪಟ್ಟವರ ಶವ ಸಂಸ್ಕಾರ ಮಾಡಲು ಮುಂದಾಗಿದ್ದು, ಇವರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಿಪ್ಪಾಣಿ ಪಟ್ಟಣದ ಕೆಲ ಯುವಕರು ಸೇರಿ ಆಗಸ್ಟ್ 21 ರಂದು ಹೊಸದಾಗಿ ಏಕತಾ ಫೌಂಡೇಶನ್ ಸ್ಥಾಪಿಸಿ, ನಿಪ್ಪಾಣಿ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಸೋಂಕಿನಿಂದ ಮೃತ ಪಟ್ಟ ವ್ಯಕ್ತಿಗಳ ಶವ ಸಂಸ್ಕಾರ ಮಾಡುವ ಕೆಲಸ ಮಾಡುತ್ತಿದ್ದಾರೆ.
ಕೇವಲ 26 ದಿನಗಳಲ್ಲಿ 30ಕ್ಕೂ ಅಧಿಕ ಕೊರೊನಾ ರೋಗಿಗಳ ಶವ ಸಂಸ್ಕಾರ ಮಾಡಿ ಮಾನವೀಯತೆ ಜೀವಂತವಗಿದೆ ಎಂದು ತೋರಿಸಿ ಕೊಟ್ಟಿದ್ದಾರೆ. ಏಕತಾ ಫೌಂಡೇಶನ್ ವತಿಯಿಂದ ಸೋಂಕಿತ ವ್ಯಕ್ತಿ ಮೃತ ಪಟ್ಟಿದ್ದರೆ, ಹಗಲು-ರಾತ್ರಿ ಅನ್ನದೇ ಅಲ್ಲಿಗೆ ಹೋಗಿ ಅವರ ದೇಹವನ್ನು ತಂದು ಆಯಾ ಧರ್ಮದ ವಿಧಿ ವಿಧಾನಗಳ ಪ್ರಕಾರ ಅಂತ್ಯಕ್ರಿಯೆ ನೆರವೇರಿಸುತ್ತಿದ್ದಾರೆ.
ಏಕತಾ ಫೌಂಡೇಶನ್ ಕಾರ್ಯದಲ್ಲಿ ಬೇರೆ ಬೇರೆ ಸಮುದಾಯದ ಸಾಮಾಜಿಕ ಕಾರ್ಯಕರ್ತರು ಮತ್ತು ವೈದ್ಯರು ಸಹ ಭಾಗಿಯಾಗಿ ಮಾನವೀಯತೆ ಮೆರೆದಿದ್ದಾರೆ, ಅಂತ್ಯಕ್ರಿಯೆ ಸಮಯದಲ್ಲಿ ಫೌಂಡೇಶನ್ ಸದಸ್ಯರು ಅತ್ಯಂತ ಎಚ್ಚರಿಕೆ ವಹಿಸಿ ಪಿಪಿಇ ಕಿಟ್ ಧರಿಸಿ, ಸಾನಿಟೈಜರ್ ಉಪಯೋಗಿಸಿ ಅಂತ್ಯಕ್ರಿಯೆ ಮಾಡುತ್ತಿದ್ದು,ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.