ಬೆಳಗಾವಿ:ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೇಶನೂರು ಗ್ರಾಮದ ಮೂವರು ವ್ಯಕ್ತಿಗಳು ಒಂದೇ ವಾರದಲ್ಲಿ ಕೊರೊನಾಗೆ ಬಲಿಯಾಗಿದ್ದು, ಸ್ಥಳೀಯರಲ್ಲಿ ಆತಂಕ ತೀವ್ರವಾಗಿದೆ.
ಚಾಲಕನಾಗಿ ಕೆಲಸ ಮಾಡುತ್ತಿದ್ದ 40 ವರ್ಷ ವಯಸ್ಸಿನ ವ್ಯಕ್ತಿಯಿಂದ ಕುಟುಂಬಕ್ಕೆ ಸೋಂಕು ಹರಡಿತ್ತು. ಚಿಕಿತ್ಸೆ ಫಲಿಸದೇ ವಾರದ ಹಿಂದೆ ಚಾಲಕ ಮೃತಪಟ್ಟಿದ್ದರು. ಚಾಲಕನಿಂದ 50 ವರ್ಷ ವಯಸ್ಸಿನ ಸಹೋದರಿಗೂ ಸೋಂಕು ತಗುಲಿದ್ದು, ಆಕೆಯೂ ನಾಲ್ಕು ದಿನಗಳ ಹಿಂದೆ ಮೃತಪಟ್ಟಿದ್ದಾರೆ. ಮೃತರ ಮನೆಗೆ ಸಾಂತ್ವನ ಹೇಳಲು ಹೋದ ಪಕ್ಕದ ಮನೆ ಮಹಿಳೆಗೂ ಸೋಂಕು ದೃಢಪಟ್ಟಿತ್ತು. 56 ವರ್ಷ ವಯಸ್ಸಿನ ಈ ಮಹಿಳೆಯೂ ಎರಡು ದಿನಗಳ ಹಿಂದೆ ಮೃತಪಟ್ಟಿದ್ದಾರೆ.
ದೇಶನೂರು ಗ್ರಾಮದ ಜನರಲ್ಲಿ ಆತಂಕ ಮೃತರ ಕುಟುಂಬದ ಆರು ಜನ ಸದಸ್ಯರಿಗೆ ಸೋಂಕು ತಗುಲಿದ್ದು, 28 ಜನರಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಕ್ವಾರೆಂಟೈನ್ ಮಾಡಿದ್ದಾರೆ. ವಿಪರ್ಯಾಸವೆಂದರೆ, ಒಂದು ವಾರ ಕಳೆದರೂ ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಗಂಟಲು ದ್ರವ ಸಂಗ್ರಹಿಸಿಲ್ಲ. ಈ ಮೂವರು ಕೊರೊನಾ ವರದಿ ಬರುವ ಮುನ್ನವೇ ಮೃತಪಟ್ಟಿದ್ದು, ಸೋಂಕಿತರ ಕುಟುಂಬದಲ್ಲಿ ಸಾವಿನ ಭಯ ಕಾಡುತ್ತಿದೆ.
ಕೊರೊನಾ ಟೆಸ್ಟ್ ಮಾಡಿ ಸೂಕ್ತ ಚಿಕಿತ್ಸೆ ನೀಡಬೇಕಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳು ಇತ್ತ ಸುಳಿದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಜನರು ತಮ್ಮಷ್ಟಕ್ಕೆ ತಾವೇ ಮನೆಯಲ್ಲಿ ಕ್ವಾರಂಟೈನ್ ಆಗಿ ಸೋಂಕು ಹರಡುವುದನ್ನು ತಡೆಯಲು ಹರಸಾಹಸ ಪಡುತ್ತಿದ್ದಾರೆ.