ಬೆಳಗಾವಿ:ಮೌಢ್ಯ ಮತ್ತು ಮೂಢನಂಬಿಕೆಗಳಿಂದ ಕೊರೊನಾ ವಿರುದ್ಧದ ಹೋರಾಟದಲ್ಲಿ ಗೆಲವು ಸಾಧಿಸಲು ಸಾಧ್ಯವಿಲ್ಲ. ಮೌಢ್ಯಗಳಿಂದ ಕೊರೊನಾ ವೈರಸ್ ಹೆಚ್ಚಾಗಲಿದ್ದು, ವಿನಾಕಾರಣ ಮೌಢ್ಯದ ಹೆಸರಿನಲ್ಲಿ ಕೋವಿಡ್ ನಿಯಮಗಳನ್ನು ಪಾಲನೆ ಮಾಡದಿದ್ದರೇ ಅಂಥವರ ವಿರುದ್ಧ ಕಾನೂನು ರೀತಿಯಲ್ಲಿ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಎಚ್ಚರಿಕೆ ನೀಡಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಕೆಲವು ಹಳ್ಳಿಗಳಲ್ಲಿ ಮೌಢ್ಯ, ಮೂಢನಂಬಿಕೆಗಳು ವೈಜ್ಞಾನಿಕ ತಳಹದಿಯ ಮೇಲೆ ನಂಬಿಕೆ ಕಳದುಕೊಂಡಿರುವ ಜನರು ಮರಳಾಗುತ್ತಿರುವುದು ವಿಷಾದನೀಯ ಸಂಗತಿ ಎಂದು ಎಸ್ಪಿ ಬೇಸರ ವ್ಯಕ್ತಪಡಿಸಿದರು.
ಗೋಕಾಕ್ ತಾಲೂಕಿನ ಮರಡಿಮಠ ಗ್ರಾಮದಲ್ಲಿ ದೇವರ ಕುದುರೆ ಮರಣ ಹೊಂದಿದೆ ಜನರು ಅಂದುಕೊಂಡಿದ್ದರು. ಕುದುರೆಯ ಅಂತ್ಯಕ್ರಿಯೆ ಮಾಡಲು ಸಾವಿರಾರು ಜನರು ಸೇರಿ ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದರು. ಜನರಿಗೆ ಕೋವಿಡ್ ಸೋಂಕಿನ ಬಗ್ಗೆ ತಿಳುವಳಿಕೆ ಇದೆ. ಆದ್ರೂ ಸಹ ಕೆಲ ಮೌಢ್ಯಗಳ ವೈಜ್ಞಾನಿಕ ತಳಹದಿಯನ್ನು ಬದಿಗೆ ಒತ್ತಿ ಅದು ಮುಂದುವರೆಯುತ್ತದೆ ಎಂಬುದು ಅದೊಂದು ಪ್ರಕರಣ ನಿದರ್ಶನವಾಗಿತ್ತು. ಹೀಗಾಗಿ ಅಂತ್ಯಕ್ರಿಯೆ ನಡೆದ ಮರಡಿಮಠದ ಗ್ರಾಮವನ್ನು ಸೀಲ್‌ಡೌನ್ ಮಾಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಗ್ಯ ಇಲಾಖೆಯಿಂದ ಕೋವಿಡ್ ತಪಾಸಣೆ ನಡೆಸಿ 14 ದಿನಗಳ ಕಾಲ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಜತೆಗೆ ಪೊಲೀಸ್ ಇಲಾಖೆಯೂ ಆ ಗ್ರಾಮದ ಮೇಲೆ ನಿಗಾ ಇಟ್ಟಿದೆ ಎಂದರು.
ಇದಲ್ಲದೇ ಕಳೆದ ಎರಡು ದಿನಗಳ ಹಿಂದೆ ರಾಯಬಾಗ ತಾಲೂಕಿನ ಅಳಕನೂರಿನ ನಿವಾಸಿಯೊಬ್ಬರು 21 ಕುರಿಗಳನ್ನು ಬಲಿ ಕೊಟ್ಟರೆ ಕೊರೊನಾ ಸೋಂಕು ತೊಲಗಲಿದೆ ಎಂದು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದರು. ಆತನ ವಿರುದ್ಧವೂ ಕಾನೂನಿನ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ. ಆದ್ರೆ, ಸರ್ಕಾರ ಮತ್ತು ಜಿಲ್ಲಾಡಳಿತ ಕಳೆದ ಒಂದು ವರ್ಷದಿಂದ ಜನರಿಗೆ ವೈಜ್ಞಾನಿಕವಾಗಿ ಎಷ್ಟೇ ತಿಳುವಳಿಕೆ ನೀಡಿ, ಸೋಂಕು ಹೊಗಲಾಡಿಸಲು ಯಾವ ಯಾವ ಕ್ರಮ ಕೈಗೊಳ್ಳಬೇಕೆಂದು ಮಾರ್ಗಸೂಚಿ ಪ್ರಕಟಿಸಿದರೂ ಅದರ ಅರಿವು ಇಲ್ಲದಂತೆ ಜನರು ವರ್ತನೆ ಮಾಡುತ್ತಿದ್ದಾರೆ ಎಂದರು.