ಬೆಳಗಾವಿ: ಕರ್ನಾಟಕದಿಂದ ಬೇರೆ ರಾಜ್ಯಗಳಿಗೆ ಅತಿ ಹೆಚ್ಚಾಗಿ ತರಕಾರಿ ಪೂರೈಕೆ ಮಾಡುತ್ತಿದ್ದ ಬೆಳಗಾವಿ ಎಂಪಿಎಂಸಿ ಮಾರುಕಟ್ಟೆ ಇದೀಗ ಥಂಡಾ ಹೊಡೆದಿದೆ. ರೈತರು ಹಾಗೂ ಹೋಲ್ಸೇಲ್ ವ್ಯಾಪಾರಿಗಳ ಮೇಲೆ ಕೊರೊನಾ ಕರಿ ನೆರಳಿನ ಪ್ರಭಾವ ಬೀರಿದೆ.
ಹೊರ ರಾಜ್ಯಗಳಿಗೆ ಅತಿ ಹೆಚ್ಚು ತರಕಾರಿ ಎಕ್ಸ್ಪೋರ್ಟ್ ಆಗುವುದು ಬೆಳಗಾವಿಯಿಂದ. ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳಕ್ಕೆ ಬೆಳಗಾವಿ ಎಪಿಎಂಸಿಯಿಂದಲೇ ತರಕಾರಿ ಪೂರೈಕೆ ಮಾಡಲಾಗುತ್ತಿದೆ. ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಲಾಕ್ಡೌನ್ ಇದ್ದ ಕಾರಣ ತರಕಾರಿ ಪೂರೈಕೆ ಪ್ರಮಾಣ ಇಳಿಕೆಯಾಗಿತ್ತು. ಇದರಿಂದ ರೈತರು ಹಾಗೂ ಹೋಲ್ಸೇಲ್ ತರಕಾರಿ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಗಿದೆ.
ಬೆಳಗಾವಿ ಎಪಿಎಂಸಿ ಮಾರುಕಟ್ಟೆ ವರ್ಷ ಪೂರ್ತಿ ವಿವಿಧ ಬಗೆಯ ತರಕಾರಿಗಳಾದ ಆಲೂಗಡ್ಡೆ, ಈರುಳ್ಳಿ, ಬದನೆಕಾಯಿ, ಮೆಣಸಿನಕಾಯಿಗಳನ್ನು ದೇಶದ ವಿವಿಧ ಭಾಗಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಗೋವಾ, ಮಹಾರಾಷ್ಟ್ರ ರಾಜ್ಯಗಳು ತರಕಾರಿಗೆ ಬೆಳಗಾವಿ ಎಪಿಎಂಸಿಯನ್ನೇ ಅವಲಂಬಿಸಿವೆ. ಬೆಳಗಾವಿ ಸೇರಿದಂತೆ ನೆರೆಯ ಜಿಲ್ಲೆಗಳ ಹೆಚ್ಚಿನ ರೈತರು ಬೆಳಗಾವಿ ಎಪಿಎಂಸಿಗೆ ತಮ್ಮ ತರಕಾರಿಗಳನ್ನು ಹೊತ್ತು ತಂದು ಉತ್ತಮ ದರಕ್ಕೆ ಮಾರಾಟ ಮಾಡುತ್ತಾರೆ.
ಬೆಳಗಾವಿ ಜಿಲ್ಲೆಯ ಸಪ್ತನದಿಗಳು ತರಕಾರಿ ಬೆಳೆಗೆ ಸಹಕಾರಿಯಾಗಿವೆ. ರಾಜ್ಯದ ಕರಾವಳಿ ಭಾಗ ಹಾಗೂ ದಕ್ಷಿಣ ಕರ್ನಾಟಕ ಭಾಗಕ್ಕೂ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಪೂರೈಕೆ ಬೆಳಗಾವಿಯಿಂದ ಆಗುತ್ತದೆ. ಈ ವರ್ಷ ಉತ್ತಮ ಮಳೆಯಾಗುತ್ತಿದ್ದು, ರೈತರು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ. ಆದರೆ, ಕೊರೊನಾದಿಂದ ಬೆಳೆದ ಬೆಳೆಗೆ ಲಾಭ ದೊರೆಯುವುದೋ ಇಲ್ಲವೋ ಎಂಬ ಚಿಂತೆಯಲ್ಲಿದ್ದಾರೆ.