ಬೆಳಗಾವಿ: ಬಂಗಾರದಂತ ಸೀರೆಗಳನ್ನು ನೇಯುವ ನೇಕಾರ ಕುಟುಂಬಗಳನ್ನು ಮಹಾಮಾರಿ ಕೊರೊನಾ ಸಂಕಷ್ಟಕ್ಕೆ ದೂಡಿದೆ. ಕಳೆದ ವರ್ಷ ಪ್ರವಾಹದಿಂದ ಸಾಕಷ್ಟು ನಷ್ಟ ಅನುಭವಿಸಿದ್ದ ಜಿಲ್ಲೆಯ ನೇಕಾರರು, ಈ ವರ್ಷ ಕೊರೊನಾ ಹೊಡೆತಕ್ಕೆ ತತ್ತರಿಸಿದ್ದಾರೆ.
ಗಡಿ ಜಿಲ್ಲೆ ಬೆಳಗಾವಿಯಲ್ಲಿ 22 ಸಾವಿರ ವಿದ್ಯುತ್ ಮಗ್ಗಗಳಿವೆ. ಕಳೆದ ವರ್ಷ ಜಿಲ್ಲೆಯನ್ನು ನುಂಗಿದ್ದ ಪ್ರಚಂಡ ಪ್ರವಾಹಕ್ಕೆ ಸಾವಿರಾರು ವಿದ್ಯುತ್ ಮಗ್ಗಗಳು ಕೊಚ್ಚಿಕೊಂಡು ಹೋಗಿದ್ದವು. ಅಲ್ಲದೇ ಆಗ ಸಿದ್ಧಪಡಿಸಿದ್ದ ಲಕ್ಷಾಂತರ ಮೌಲ್ಯದ ಸೀರೆಗಳು ಹಾಗೂ ಕಚ್ಚಾವಸ್ತುಗಳು ಕೂಡ ಪ್ರವಾಹಕ್ಕೆ ತುತ್ತಾದ ಕಾರಣ ನೇಕಾರ ಕುಟುಂಬಗಳು ಸಾಕಷ್ಟು ತೊಂದರೆ ಅನುಭವಿಸಿವೆ.
ರಾಜ್ಯ ಸರ್ಕಾರದ ನೆರವು ಹಾಗೂ ಸಾಲ ಮಾಡಿ ಪ್ರವಾಹ ಹೊಡೆತದಿಂದ ಹೊರಬಂದಿದ್ದ ನೇಕಾರರು, ವಿದ್ಯುತ್ ಮಗ್ಗಗಳನ್ನು ಪುನಾರಂಭಿಸಲು ಬದುಕು ಕಟ್ಟಿಕೊಳ್ಳುತ್ತಿದ್ದರು. ಈ ವರ್ಷ ಉತ್ತಮ ಆದಾಯ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದ ನೇಕಾರರಿಗೆ ಮಹಾಮಾರಿ ಕೊರಾನಾ ಹೊಡೆತ ಕೊಟ್ಟಿದೆ. ನೇಯ್ದಿರುವ ಸೀರೆಗಳನ್ನು ಲಾಕ್‍ಡೌನ್ ಹಿನ್ನೆಲೆ ಮಾರಾಟಕ್ಕೆ ಬೇರೆಡೆ ಸಾಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಲಕ್ಷಾಂತರ ಮೌಲ್ಯದ ಸೀರೆಗಳನ್ನು ತಮ್ಮ ಮನೆ ಹಾಗೂ ಗೋಡಾನ್‍ಗಳಲ್ಲಿ ಇರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚು ನೇಕಾರರು ಇರುವುದು ಬೆಳಗಾವಿಯಲ್ಲೇ ಹಾಗೂ ಅತಿ ಹೆಚ್ಚು ಸೀರೆಗಳ ಪೂರೈಕೆ ಆಗುವುದು ಈ ಜಿಲ್ಲೆಯಲ್ಲಿಂದಲೇ. ಆದರೆ ಕಳೆದೆರಡು ವರ್ಷಗಳಿಂದ ಸಂಕಷ್ಟ, ಸಮಸ್ಯೆ ಎದುರಾಗುತ್ತಿದ್ದು ನೇಕಾರರನ್ನು ಆತಂಕಕ್ಕೆ ದೂಡಿದೆ.