ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಮೊದಲ ಕೋವಿಡ್ ಪ್ರಕರಣ ಪತ್ತೆಯಾಗಿದೆ. ಸರ್ಕಾರಿ ಅಧಿಕಾರಿಗೆ ಸೋಂಕು ತಗುಲಿದೆ. ಬಿಮ್ಸ್ ಆಸ್ಪತ್ರೆಯಲ್ಲಿ ರ‍್ಯಾಪಿಡ್ ಟೆಸ್ಟ್ ಮಾಡಿಸಿಕೊಂಡ ವೇಳೆ ಸೋಂಕು ದೃಢಪಟ್ಟಿದೆ.
ಕಳೆದೊಂದು ವಾರದಿಂದ ಕೆಮ್ಮು, ನೆಗಡಿ ಸಮಸ್ಯೆಯಿಂದ ಅಧಿಕಾರಿ ಬಳಲುತ್ತಿದ್ದರು. ವೈದ್ಯರ ಸಲಹೆಯಂತೆ ಹೋಮ್ ಐಸೋಲೇಶನ್ ಆಗಿದ್ದಾರೆ. ರೂಪಾಂತರಿ ಹಾವಳಿ ಶುರುವಾಗಿರುವಾಗಲೇ ಒಂದೂವರೆ ವರ್ಷದ ಬಳಿಕ ಜಿಲ್ಲೆಯಲ್ಲಿ ಮೊದಲ ಪಾಸಿಟಿವ್ ಪ್ರಕರಣ ದೃಢಪಟ್ಟಿದೆ.
ಕೋವಿಡ್ ಮುನ್ನೆಚ್ಚರಿಕೆ ಸಭೆ: ಕಳೆದ ಬಾರಿ ಸಂಭವಿಸಿದ ಅನಾಹುತಗಳು ಮರುಕಳಿಸದಂತೆ ಜೆಎನ್.1 ರೂಪಾಂತರಿ ತಳಿ ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಡಿಸಿ ನಿತೇಶ್ ಪಾಟೀಲ್ ತಿಳಿಸಿದರು. ಬೆಳಗಾವಿ ಬಿಮ್ಸ್ ಸಭಾಂಗಣದಲ್ಲಿ ಇಂದು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ದಿಢೀರ್ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಮ್ಸ್‌ನಲ್ಲಿ ಈಗಾಗಲೇ 908 ಕೋವಿಡ್ ಆಕ್ಸಿಜನ್ ಬೆಡ್ಗಳು ಲಭ್ಯ ಇವೆ. 78 ವೆಂಟಿಲೇಟರ್ ಇದ್ದು, ಎಲ್ಲವೂ ಕಾರ್ಯನಿರ್ವಹಿಸುತ್ತಿವೆ. ಈ ಹಿಂದೆ ಕೋವಿಡ್ ನಿರ್ವಹಿಸಿರುವ ಅನುಭವ ಸಿಬ್ಬಂದಿಗೆ ಇರುವ ಹಿನ್ನೆಲೆಯಲ್ಲಿ ಯಾವುದೇ ತೊಂದರೆ ಆಗುವುದಿಲ್ಲ ಎಂದರು.
ಮಹಾರಾಷ್ಟ್ರ ಹಾಗೂ ಗೋವಾ ಗಡಿಭಾಗದಲ್ಲಿ ಚೆಕ್ಪೋಸ್ಟ್ನಲ್ಲಿ ತಪಾಸಣೆ ಮಾಡುವ ನಿಟ್ಟಿನಲ್ಲಿ ಸರ್ಕಾರದ ನಿಯಮವನ್ನು ಅಚ್ಚುಕಟ್ಟಾಗಿ ಪಾಲನೆ ಮಾಡಲಾಗುತ್ತದೆ. ಕೋವಿಡ್ ಕಿಟ್‌ಗಳನ್ನು ನೀಡುವಂತೆ ಈಗಾಗಲೇ ಸರ್ಕಾರಕ್ಕೆ ಈಗಾಗಲೇ ಪತ್ರ ಬರೆಯಲಾಗಿದೆ. ಶೀಘ್ರವೇ ಅವು ಬರಲಿವೆ ಎಂದು ಹೇಳಿದರು.
ಶಾಸಕ ಆಸೀಫ್ ಸೇಠ್ ಮಾತನಾಡಿ, ಈ ಹಿಂದೆ ಜಿಲ್ಲೆಯಲ್ಲಿ ಕೋವಿಡ್ನಿಂದ ಸಂಭವಿಸಿದ ಸಾವು, ನೋವುಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿಯ ಕೋವಿಡ್ ಬಗ್ಗೆ ಮುನ್ನೆಚ್ಚರಿಕೆಯಾಗಿ ಪೂರ್ವಭಾವಿ ಸಭೆ ಮಾಡಿದ್ದೇವೆ. ಜಿಲ್ಲೆಯಲ್ಲಿ ಜನ ಭಯಪಡುವ ಅಗತ್ಯ ಇಲ್ಲ. ಗಡಿಭಾಗದಲ್ಲಿ ಹೆಚ್ಚಿನ ನಿಗಾವಹಿಸಲು ಸೂಚಿಸಲಾಗಿದೆ. ಅಲ್ಲದೆ, ಕೋವಿಡ್ ತಪಾಸಣೆ ಹೆಚ್ಚು ಮಾಡುವಂತೆಯೂ ತೀರ್ಮಾನಿಸಲಾಗಿದೆ.