ಬೆಳಗಾವಿ: ದೇಶಾದ್ಯಂತ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಕುಕ್ಕುಟೋದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಕೋಳಿ ಫಾರಂ ಮಾಲೀಕರು ಹಳ್ಳಿಗಳಿಗೆ ತೆರಳಿ ಅತಿ ಕಡಿಮೆ ಬೆಲೆಗೆ ಕೋಳಿಗಳನ್ನು ಮಾರಾಟ ಮಾಡುತ್ತಿದ್ದಾರೆ.
ಕೊರೊನಾ ಎಫೆಕ್ಟ್: 200 ರೂ.ಗೆ 5 ಕೋಳಿ, ಖರೀದಿಗೆ ಮುಗಿಬಿದ್ದ ಜನತೆ - ಕರ್ನಾಟಕದಲ್ಲಿ ಕೊರೊನಾ ವೈರಸ್ ಪ್ರಕರಣ
ದೇಶದ ಹಲವೆಡೆ ಮಹಾಮಾರಿ ಕೊರೊನಾ ವೈರಸ್ ಪ್ರಕರಣಗಳು ಕಂಡುಬರುತ್ತಿರುವುದರಿಂದ ಕುಕ್ಕುಟೋದ್ಯಮಕ್ಕೆ ದೊಡ್ಡ ನಷ್ಟವಾಗುತ್ತಿದೆ. ಹೀಗಾಗಿ ಕೋಳಿ ಫಾರಂ ಮಾಲೀಕರು ತಾವೇ ವಾಹನದಲ್ಲಿ ಕೋಳಿಗಳನ್ನು ತುಂಬಿಕೊಂಡು ಹೋಗಿ ಮಾರಾಟ ಮಾಡುವ ಅನಿವಾರ್ಯತೆ ಎದುರಾಗಿದೆ.
![ಕೊರೊನಾ ಎಫೆಕ್ಟ್: 200 ರೂ.ಗೆ 5 ಕೋಳಿ, ಖರೀದಿಗೆ ಮುಗಿಬಿದ್ದ ಜನತೆ Corona affect: people selling chicken for low price](https://etvbharatimages.akamaized.net/etvbharat/prod-images/768-512-6370209-thumbnail-3x2-bgms.jpg)
ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಿಕನ್ ಸೇವನೆಗೆ ಜನರು ಹಿಂದೇಟು ಹಾಕುತ್ತಿದ್ದಾರೆ. ಚಿಕನ್ ತಿನ್ನುವುದರಿಂದ ವೈರಸ್ ಹರಡುತ್ತದೆ ಎಂಬ ತಪ್ಪು ತಿಳುವಳಿಕೆಯೂ ಕೂಡ ಕುಕ್ಕುಟೋದ್ಯಮದ ನಷ್ಟಕ್ಕೆ ಕಾರಣವಾಗಿದೆ. ಚಿಕನ್ ಖರೀದಿಯಲ್ಲಿ ಇಳಿಮುಖವಾಗುತ್ತಿರುವುದರಿಂದ ಕೋಳಿಗಳ ಮಾರಾಟದ ದರದಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆ ಆಗಿದೆ. ಹೀಗಾಗಿ ಕೋಳಿ ಫಾರಂ ಮಾಲೀಕರು ಹಳ್ಳಿಗಳಿಗೆ ತೆರಳಿ ಕೋಳಿಗಳನ್ನು ಮಾರುತ್ತಿದ್ದಾರೆ.
ಬೆಳಗಾವಿ ನಗರದ ವಡಗಾಂವ್ನಲ್ಲಿ ಫಾರಂ ಮಾಲೀಕರು ವಾಹನದಲ್ಲಿ ಕೋಳಿಗಳನ್ನು ತಂದು ಸಾರ್ವಜನಿಕ ಸ್ಥಳಗಳಲ್ಲೇ 200ಗೇ 5 ರಂತೆ ಕೋಳಿಗಳನ್ನು ಬಿಕರಿ ಮಾಡಿದ್ದಾರೆ. ಮೈಕ್ ಮೂಲಕ ಕೂಗಿ ನೂರಕ್ಕೆ ಎರಡು, ಇನ್ನೂರಕ್ಕೆ ಐದು ಕೋಳಿ ಎನ್ನುತ್ತ ಕೋಳಿಗಳನ್ನು ಬಿಕರಿ ಮಾಡುತ್ತಿರುವ ದೃಶ್ಯ ಕಂಡುಬಂದಿದೆ. ಅತ್ಯಂತ ಕಡಿಮೆ ಬೆಲೆಗೆ ಕೋಳಿಗಳು ಮಾರಾಟ ಆಗುವುದನ್ನು ಕಂಡ ಜನರು ಖರೀದಿಗೆ ಮುಗಿಬೀಳುತ್ತಿದ್ದಾರೆ.