ಕರ್ನಾಟಕ

karnataka

ETV Bharat / state

ಸಂಗೊಳ್ಳಿ ರಾಯಣ್ಣ ಪುತ್ಥಳಿ ವಿವಾದ: ಆ. 29 ರಂದು ಅಂತಿಮ‌ ನಿರ್ಧಾರ ಎಂದ ಸಚಿವ ಜಾರಕಿಹೊಳಿ

ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪುತ್ಥಳಿಯಿದ್ದ ಸ್ಥಳದಲ್ಲೇ ಮತ್ತೆ ಸ್ಥಾಪಿಸುವುದಾಗಿ ನಾನೇನೂ ಭರವಸೆ ನೀಡಿಲ್ಲ. ಮೊದಲಿದ್ದ ಸ್ಥಳದಲ್ಲೇ ಪುತ್ಥಳಿ ನಿರ್ಮಿಸಬೇಕೆಂಬುದು ಪ್ರತಿಭಟನಾ ನಿರತರ ಆಗ್ರಹವಾಗಿದೆ. ಆದರೆ, ಕಾನೂನು ತೊಡಕಿರುವುದರಿಂದ ನಾನು ಅವರಿಗೆ ಯಾವುದೇ ಭರವಸೆ ನೀಡಿಲ್ಲ ಎಂದು ಸಚಿವ ರಮೇಶ್​ ಜಾರಕಿಹೊಳಿ ಹೇಳಿದ್ದಾರೆ.

Controversy over sangolli Rayanna Statue relocate
ಸಂಗೊಳ್ಳಿ ರಾಯಣ್ಣ ಪುತ್ಥಳಿ ವಿವಾದ

By

Published : Aug 27, 2020, 4:47 PM IST

ಬೆಳಗಾವಿ :ಸಂಗೊಳ್ಳಿ ರಾಯಣ್ಣ ಪುತ್ಥಳಿ ವಿವಾದವನ್ನು ಇತ್ಯರ್ಥಗೊಳಿಸಲು ಆಗಸ್ಟ್‌ 29 ರಂದು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

ಪ್ರತಿಭಟನಾ ನಿರತರನ್ನು ಭೇಟಿಯಾದ ಬಳಿಕ ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿ, ಪೀರನವಾಡಿಯಲ್ಲಿ ಸಂಗೊಳ್ಳಿಯ ರಾಯಣ್ಣ ಪುತ್ಥಳಿಯಿದ್ದ ಸ್ಥಳದಲ್ಲೇ ಮತ್ತೆ ಸ್ಥಾಪಿಸುವುದಾಗಿ ನಾನೇನೂ ಭರವಸೆ ನೀಡಿಲ್ಲ. ಮೊದಲಿದ್ದ ಸ್ಥಳದಲ್ಲೇ ಪುತ್ಥಳಿ ನಿರ್ಮಿಸಬೇಕೆಂಬುವುದು ಪ್ರತಿಭಟನಾ ನಿರತ ಸಂಗೊಳ್ಳಿ ರಾಯಣ್ಣನ ಅಭಿಮಾನಿಗಳ ಆಗ್ರಹವಾಗಿದೆ. ಆದರೆ, ಕಾನೂನು ತೊಡಕಿರುವುದರಿಂದ ನಾನು ಅವರಿಗೆ ಯಾವುದೇ ಭರವಸೆ ನೀಡಿಲ್ಲ. ಹಾಲುಮತ ಸಮಾಜದ ನಾಯಕರ ಜೊತೆಗೆ ಸಭೆ ನಡೆಸಿ ಒಮ್ಮತದ ನಿರ್ಣಯ ತೆಗೆದುಕೊಳ್ಳುತ್ತೇವೆ. ಹೊರಗಿನವರು ಬಂದು ಪ್ರತಿಭಟನೆ ನಡೆಸುತ್ತಿದ್ದಾರೆ, ಸ್ಥಳೀಯರು ನಮ್ಮ ಮುಂದೆ ಬರಲು ಹೆದರುತ್ತಿದ್ದಾರೆ. ಈಶ್ವರಪ್ಪ ಆ ಸಮಾಜದ ನಾಯಕ, ಅವರು ಬಂದು ಸಲಹೆ ನೀಡಲಿ. ಹೊಸ ಜಾಗ ಪರಿಶೀಲನೆ ಬಗ್ಗೆ ಜಿಲ್ಲಾಡಳಿತದ ಜೊತೆ ಚರ್ಚಿಸುತ್ತೇನೆ ಎಂದರು.

ಸಚಿವ ರಮೇಶ್​ ಜಾರಕಿಹೊಳಿ ಪ್ರತಿಕ್ರಿಯೆ

ಇದಕ್ಕೂ ಮುಂಚೆ ಪೀರನವಾಡಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪುನರ್​ ಪ್ರತಿಷ್ಠಾನೆಗೆ ಆಗ್ರಹಿಸಿ ಸುವರ್ಣಸೌಧದಿಂದ ನಗರದ ಡಿಸಿ ಕಚೇರಿಗೆ ಹೊರಟಿದ್ದ ಬೃಹತ್ ಪ್ರತಿಭಟನಾ ರ‍್ಯಾಲಿಯನ್ನು ಬಿ.ಎಸ್.ಯಡಿಯೂರಪ್ಪ ಮಾರ್ಗದ ಮಾಲಿನಿ ಸಿಟಿ ಮೈದಾನದ ಬಳಿ ಪೊಲೀಸರು ತಡೆದರು. ಈ ವೇಳೆ ಡಿಸಿ ಎಂ.ಜಿ.ಹಿರೇಮಠ, ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಸ್ಥಳಕ್ಕೆ ಭೇಟಿ ನೀಡಿ ಮನವೊಲಿಸಲು ಪ್ರಯತ್ನಿಸಿದರು. ಆದರೆ, ಅಧಿಕಾರಿಗಳ ಮನವಿಗೆ ಸ್ಪಂದಿಸದ ಕುರುಬ ಸಮುದಾಯದ ಮುಖಂಡರು ಉಸ್ತುವಾರಿ ಸಚಿವ ರಮೇಶ್​ ಜಾರಕಿಹೊಳಿ ಸ್ಥಳಕ್ಕೆ ಬರುವಂತೆ ಪಟ್ಟುಹಿಡಿದರು.

ಈ ವೇಳೆ ಸಚಿವ ರಮೇಶ ಜಾರಕಿಹೊಳಿ ಕುರುಬ ಸಮುದಾಯದ ಮುಖಂಡರು ಮತ್ತು ವಿವಿಧ ಕನ್ನಡಪರ ಸಂಘಟನೆಯ ಮುಂಖಡರ ಜೊತೆ ಸಭೆ ನಡೆಸುತ್ತಿದ್ದರು. ರಾಯಣ್ಣ ಅಭಿಮಾನಿಗಳ ಹೋರಾಟ ಉಗ್ರ ‌ಸ್ವರೂಪ ಪಡೆದಿದ್ದರಿಂದ ಸಭೆಯನ್ನು ಅರ್ಧಕ್ಕೆ ನಿಲ್ಲಿಸಿ ಸಚಿವರು ಕುದ್ದಾಗಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾ ನಿರತರ ಮನವೊಲಿಸಲು ಪ್ರಯತ್ನಿಸಿದರು.

ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಗೆ 2018ರಲ್ಲಿ ನಾನೇ ಮೊದಲು ಸರ್ಕಾರಕ್ಕೆ ಪತ್ರ ಬರೆದಿದ್ದೆ. ರಸ್ತೆ ವಿಸ್ತರಣೆ ಸಮಸ್ಯೆ, ಕಾನೂನು ತೊಡಕಿರುವುದರಿಂದ ಅದು ಸಾಧ್ಯವಾಗಿರಲಿಲ್ಲ. ಹೀಗಾಗಿ ಅದರ ಬಗ್ಗೆಯೂ ಚರ್ಚಿಸಬೇಕಿದೆ. ಆಗಸ್ಟ್ 29 ರಂದು ಕೆ.ಎಸ್‌.ಈಶ್ವರಪ್ಪ ಆಗಮಿಸಲಿದ್ದಾರೆ. ಅವರ ಜೊತೆಯೂ ಚರ್ಚೆ ಮಾಡುತ್ತೇನೆ. ಜೊತೆಗೆ ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ‌ ಸೇರಿ ಎಲ್ಲ ನಾಯಕರ ಜೊತೆ ಮಾತನಾಡಿ ನಿರ್ಣಯ ಕೈಗೊಳ್ಳುತ್ತೇವೆ. ಈಗ ರಾಯಣ್ಣ ಅಭಿಮಾನಿಗಳು ನಮಗೆ ಸಹಕಾರ ಕೊಡಬೇಕು. ಅತಿ ಶೀಘ್ರದಲ್ಲಿ ಸಮಸ್ಯೆ ಬಗೆಹರಿಸುತ್ತೇವೆ ಎಂದರು.

ABOUT THE AUTHOR

...view details