ಚಿಕ್ಕೋಡಿ(ಬೆಳಗಾವಿ):ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದಿದ್ದೆ. ಇದರಿಂದ ನಾನು ಮಾ.27ರಂದು ಒಂದು ತೀರ್ಮಾನಕ್ಕೆ ಬರುತ್ತಿದ್ದೇನೆ. ನೀವು ಯಾವತ್ತೂ ನನ್ನ ಬೆಂಬಲವಾಗಿ ನಿಲ್ಲಿ ಎಂದು ಮುಸ್ಲಿಂ ಸಮುದಾಯಕ್ಕೆ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಮನವಿ ಮಾಡಿದರು. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನೂರಾಲ್ ಸಮುದಾಯದ ಭವನದಲ್ಲಿ ಮುಸ್ಲಿಂ ಮುಖಂಡರ ಸಭೆ ಕರೆದು ಅವರು ಮಾತನಾಡಿದರು.
"ನಾನು ಮನೆಯಲ್ಲಿ ಸುಮನ್ನೆ ಕುಳಿತಿದ್ದೆ. ಆದರೆ, ಕೆಲವರು ನನ್ನನ್ನು ಕೂರಲು ಬಿಡುತ್ತಿಲ್ಲ. ಹಾಗಾಗಿ ನಾನು ನಿಮ್ಮ ಮುಂದೆ ಬಂದಿದ್ದೇನೆ. ನಿಮ್ಮ ಅಭಿಪ್ರಾಯ ನನಗೆ ಮುಖ್ಯ. ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಬರುವ 27ರ ಒಳಗಾಗಿ ತಾಲೂಕಿನ ಎಲ್ಲ ಸಮುದಾಯದ ಮುಖಂಡರ ಸಭೆ ಕರೆಯುತ್ತೇನೆ. ಅವರು ಅಥಣಿಯಿಂದ ಚುಣಾವಣೆ ಸ್ಪರ್ಧೆ ಮಾಡು ಎಂದರೆ ನಾನು ಪಕ್ಷದಲ್ಲಿ ಟಿಕೆಟ್ ಕೇಳುತ್ತೇನೆ ಎಂದರು.
ಇನ್ನು ನಾಲ್ಕು ದಿನದಲ್ಲಿ ಎಲ್ಲಾ ಸಮುದಾಯದ ಮುಖಂಡರ ಸಭೆ ಕರೆಯುತ್ತೇನೆ. ಅವರು ಟಿಕೆಟ್ ಕೇಳು ಎಂದರೆ ನಾನು ಬಿ ಫಾರಂ ಕೇಳುತ್ತೇನೆ. ಪಕ್ಷದ ವರಿಷ್ಠರು ಬೇಡ ಎಂದರೆ ನಾನು ಅವರ ಮಾರ್ಗದಲ್ಲಿ ನಡೆಯುತ್ತೇನೆ. ಅಥಣಿ ತಾಲೂಕಿನ ಮುಸ್ಲಿಂ ಸಮುದಾಯ ನನ್ನ ಹೃದಯದಲ್ಲಿ ಅಚ್ಚೊತ್ತಿದೆ. ಎಲ್ಲಾ ಸಮುದಾಯದ ಒಪ್ಪಿಗೆ ಪಡೆದುಕೊಂಡು ಪಕ್ಷಕ್ಕೆ ತಿಳಿಸುತ್ತೇನೆ. ನೂರಕ್ಕೆ ನೂರರಷ್ಟು ಪಕ್ಷ ನನ್ನ ಕೈ ಬಿಡುವುದಿಲ್ಲ ಎಂಬ ವಿಶ್ವಾಸವಿದೆ" ಎಂದು ಲಕ್ಷ್ಮಣ ಸವದಿ ವಿಶ್ವಾಸ ವ್ಯಕ್ತಪಡಿಸಿದರು.
ಧರ್ಮಸಿಂಗ್ ಅವರಿಂದ ಅಥಣಿ ಅಭಿವೃದ್ಧಿ: ನಿಮ್ಮ ಹಲವು ವಿಚಾರಗಳು ಇಟ್ಟುಕೊಂಡು ಸಭೆ ಸೇರಿದ್ದೀರಿ. ನಾನು ಒಬ್ಬನೇ ಇದ್ದಾಗ ಕೆಲವು ವಿಚಾರಗಳನ್ನು ನಾನೇ ಪ್ರಶ್ನೆ ಮಾಡಿಕೊಳ್ಳುತ್ತೇನೆ. ನಾನು ಮೊದಲ ಬಾರಿ ಶಾಸಕನಾಗಿ ಆಯ್ಕೆಯಾದ ನಂತರ ಈ ಭಾಗದಲ್ಲಿ ನೀರಾವರಿ ವಂಚಿತವಾಗಿತ್ತು. ನಾನು ಅವತ್ತಿನ ಸಿಎಂ ಧರ್ಮಸಿಂಗ್ ಅವರಿಗೆ ನೀರಾವರಿ ಯೋಜನೆ ರೂಪಿಸುವಂತೆ ಮನವಿ ಮಾಡಿದ್ದೆ. ಆದರೆ, ಅವರು ಮೊದಲ ಬಾರಿಗೆ ಶಾಸಕರಾದ ಸವದಿ ಕೇಳಿದ್ದಾನೆ ಎಂದು 45 ಕೊಟಿ ರೂ. ಬಿಡುಗಡೆ ಮಾಡಿದ್ದರು.