ಬೆಳಗಾವಿ:ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ನಿರುಪಯುಕ್ತ ಪ್ಲಾಸ್ಟಿಕ್ಗಳನ್ನು ಬಳಸಿಕೊಂಡು ರಸ್ತೆ ನಿರ್ಮಾಣ ಮಾಡಲು ಬೆಳಗಾವಿ ಮಹಾನಗರ ಪಾಲಿಕೆ ಮುಂದಾಗಿದೆ. ಏಕ ಬಳಕೆ ಪ್ಲಾಸ್ಟಿಕ್ ಬಳಕೆಗೆ ನಿಷೇಧವಿದ್ದರೂ ಕೆಲವೆಡೆ ಇವುಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಅಲ್ಲದೇ ಈಗಾಗಲೇ ಬಳಸಿ ಬಿಸಾಡಿರುವ ಪ್ಲಾಸ್ಟಿಕ್ಗಳು ನಗರದ ಸೌಂದರ್ಯವನ್ನು ಹಾಳು ಮಾಡುತ್ತಿವೆ. ಇವೆಲ್ಲದಕ್ಕೂ ಕಡಿವಾಣ ಹಾಕಲು ಪ್ಲಾಸ್ಟಿಕ್ ಬಳಸಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ.
ಪ್ಲಾಸ್ಟಿಕ್ ಬಳಸಿ ಬೆಳಗಾವಿ ಪಾಲಿಕೆ ಕಚೇರಿ ಮುಂಭಾಗದ ಅಶೋಕ ನಗರದ 200 ಮೀಟರ್ ರಸ್ತೆ ನಿರ್ಮಿಸಲು ಕಳೆದ ವಾರ ನಡೆದ ಲೋಕೋಪಯೋಗಿ ಸ್ಥಾಯಿ ಸಮಿತಿ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ. ಇದರಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ಬಳಕೆ ಮಾಡಲಾಗುವುದಿಲ್ಲ. 1,700 ಕೆ.ಜಿ ಬಿಟುಮೆನ್ (ಡಾಂಬರ್) ಮತ್ತು 500 ಕೆ.ಜಿ ಪ್ಲಾಸ್ಟಿಕ್ ಬಳಸಲಾಗುತ್ತಿದೆ. ಬಿಟುಮೆನ್‌ನಲ್ಲಿ (ಡಾಂಬರ್) ಬಳಸುವ ಪ್ಲಾಸ್ಟಿಕ್ ಅನುಪಾತವು ಸುಮಾರು ಶೇ.8ರಷ್ಟು ಇರುತ್ತದೆ. ಮುಂದಿನ ವಾರ ಈ ಪ್ರಾಯೋಗಿಕ ರಸ್ತೆಗೆ ನಗರಾಭಿವೃದ್ಧಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡುವರು.
ಈ ಕುರಿತು ಪ್ರತಿಕ್ರಿಯಿಸಿದ ಪಾಲಿಕೆ ಪರಿಸರ ವಿಭಾಗದ ಎಇಇ ಹಣಮಂತ ಕಲಾದಗಿ ಅವರು, "ಪ್ಲಾಸ್ಟಿಕ್ ಬಳಸಿ ಮಾಡುವ ರಸ್ತೆ ಹೆಚ್ಚು ಬಾಳಿಕೆ ಬರುತ್ತದೆ. ಮಳೆಗಾಲದಲ್ಲಿ ಬೇಗ ಹದಗೆಡುವುದಿಲ್ಲ. ಇದು ಯಶಸ್ವಿಯಾದರೆ ನಗರದಲ್ಲಿ ನಿರ್ಮಾಣ ಮಾಡಲಾಗುವ ರಸ್ತೆಗಳಲ್ಲಿ ಶೇ.8ರಷ್ಟು ಪ್ಲಾಸ್ಟಿಕ್ ಬಳಸಲು ನಿರ್ಣಯ ಕೈಗೊಳ್ಳಲಾಗಿದೆ" ಎಂದರು.
ಪರಿಸರ ಹಾನಿಗೆ ತಡೆ: "ಪ್ಲಾಸ್ಟಿಕ್ ಅನ್ನು ಹಾಗೆಯೇ ಬಿಟ್ಟರೆ ಪರಿಸರಕ್ಕೆ ಹಾನಿಯಾಗುತ್ತದೆ. ಇದನ್ನು ಈ ರೀತಿ ಮರುಬಳಕೆ ಮಾಡುವುದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪ್ಲಾಸ್ಟಿಕ್ ಬಳಸಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಈ ಹಿಂದೆ ಮೈಸೂರಿನಲ್ಲಿ ಟೈಲ್ಸ್ ಮಾಡಲಾಗಿತ್ತು. ನಾವು ಇಲ್ಲಿ ರಸ್ತೆ ಮಾಡುತ್ತಿದ್ದೇವೆ" ಎಂದು ಹೇಳಿದರು.