ಬೆಳಗಾವಿ: ತಮ್ಮದೇ ಆದ ಆದರ್ಶ ಇಟ್ಟುಕೊಂಡು ಭಕ್ತರಲ್ಲಿ ಜಾಗೃತಿ ಮೂಡಿಸಿ ಧಾರ್ಮಿಕ, ಸಾಮಾಜಿಕ, ಆರ್ಥಿಕ ಕ್ರಾಂತಿಯನ್ನು ಕೊಲ್ಲಾಪುರದ ಕನ್ನೇರಿಮಠ ಮಾಡುತ್ತಿದೆ. ಹೀಗಾಗಿ ಕನ್ನೇರಿಮಠದಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ ಮೂರು ಕೋಟಿ ಹಣ ನೀಡಲಾಗುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇದು ಆದರ್ಶ ಮಠ:ಮಹಾರಾಷ್ಟ್ರದ ಕೊಲ್ಲಾಪುರದ ಕನ್ನೇರಿ ಸಿದ್ಧಗಿರಿ ಮಠದಲ್ಲಿ ಸಂತ ಸಮಾವೇಶ ಉದ್ಘಾಟಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಇಂದು ಸಹೃದಯಿ ಸಂತರ ಸಮಾವೇಶ ನಡೆಯುತ್ತಿರೋದು ಸಂತಸದ ಸಂಗತಿಯಾಗಿದೆ. ಇಲ್ಲಿ ಮೊದಲ ಬಾರಿ ಬರ್ತಿದ್ದೇನೆ. ಭಕ್ತಿ ಭಾವ ಕಾರ್ಯಕ್ರಮ, ಮಠದ ಸೇವೆಯನ್ನು ನೋಡಿದಾಗ ಇದು ಆದರ್ಶ ಮಠ ಅನಿಸುತ್ತದೆ ಎಂದರು.
ಆದರ್ಶ ಮಠ ಆಗಲು ತನ್ನದೇ ಆದ ಆದರ್ಶ ಇರಬೇಕು. ತಮ್ಮದೇ ಆದ ಆದರ್ಶ ಇಟ್ಟುಕೊಂಡು ಭಕ್ತರಲ್ಲಿ ಜಾಗೃತಿ ಮೂಡಿಸಿ ಧಾರ್ಮಿಕ, ಸಾಮಾಜಿಕ, ಆರ್ಥಿಕ ಕ್ರಾಂತಿಯನ್ನು ಕನ್ನೇರಿಮಠ ಮಾಡ್ತಿದೆ. ಭಕ್ತಿ ಅಂದ್ರೆ ಉತ್ಕೃಷ್ಟವಾದ ಪ್ರೀತಿ, ಅನ್‌ಕಂಡೀಷನಲ್ ಲವ್ ಅಂತಾ ಭಕ್ತಿಯನ್ನು ನಾನು ಇಲ್ಲಿ ನೋಡ್ತಿದೀನಿ. ಗರ್ಭದಿಂದ ಭೂತಾಯಿ. ಗರ್ಭದವರೆಗೆ ತಾಯಿ ಅನ್ನೋದು ಬಹಳ ಶ್ರೇಷ್ಠವಾದದ್ದು. ಜನ್ಮಪೂರ್ವ ಸಂಬಂಧ ತಾಯಿ ಸಂಬಂಧ. ಬಳಿಕ ಉಳಿದ ಎಲ್ಲ ಸಂಬಂಧಗಳು. ಹೀಗಾಗಿ ತಾಯಿಗೆ ಉತ್ತಮ ಸ್ಥಾನ ಕೊಟ್ಟಿದ್ದೇವೆ. ಜನ್ಮಕೊಟ್ಟ ತಾಯಿ, ಸಲಹುವ ತಾಯಿ ಎರಡನ್ನೂ ಪೋಷಿಸಿದಾಗ ನಮ್ಮ ಜನ್ಮ ಸಾರ್ಥಕವಾಗುತ್ತದೆ ಎಂದು ಸಿಎಂ ಹೇಳಿದರು.
ಸಂಸ್ಕೃತಿ, ಸಂಸ್ಕಾರ ಮಠ, ಮಂದಿರಗಳಲ್ಲಿ ಸಿಗುತ್ತದೆ: ಬೇರೆ ದೇಶಕ್ಕೂ ನಮಗೂ ಇರುವ ವ್ಯತ್ಯಾಸ ನಮ್ಮ ಸಂಸ್ಕೃತಿ, ಸಂಸ್ಕಾರ. ಅದು ನಮ್ಮ ದೇಶದ ಮಠ, ಮಂದಿರಗಳಲ್ಲಿ ಸಿಗುತ್ತದೆ. ನಾಗರಿಕತೆ ಮತ್ತು ಸಂಸ್ಕೃತಿ ಮಧ್ಯದ ವ್ಯತ್ಯಾಸ ಮರೆತಿದ್ದೇವೆ. ನಾಗರಿಕತೆಯನ್ನೇ ನಾವು ಸಂಸ್ಕೃತಿ ಅಂದುಕೊಂಡಿದ್ದೇವೆ. ನಾವು ಹಿಂದೆ ಏನಾಗಿದ್ದೆವೋ ಅದು ನಾಗರಿಕತೆ, ನಾವೇನ್ ಆಗಬೇಕಲ್ಲ ಅದು ನಮ್ಮ ಸಂಸ್ಕೃತಿ.