ಬೆಳಗಾವಿ: ಕಳೆದ 24 ದಿನಗಳಿಂದ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸುತ್ತಿದ್ದರೂ, ಅದು ಸಿಗದ ಹಿನ್ನೆಲೆ ಅರಣ್ಯ ಸಚಿವ ಉಮೇಶ ಕತ್ತಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ನ ಮಹಿಳಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು. ಈ ವೇಳೆ ಚಿರತೆ ಅಡಗಿರುವ ಗಾಲ್ಫ್ ಮೈದಾನದ ಗೇಟ್ ಮೇಲೆ ಏರಿ, ಅದರ ಒಳಗೆ ನುಗ್ಗಲು ಯತ್ನಿಸಿದರು.
ನಗರದ ಗಾಲ್ಫ್ ಮೈದಾನದ ಗೇಟ್ ಏರಿ ಕಾಂಗ್ರೆಸ್ ಕಾರ್ಯಕರ್ತೆ ಆಯೀಷಾ ಸನದಿ ಅವರು ಒಂದು ಗಂಟೆಗೂ ಅಧಿಕ ಕಾಲ ಹೈಡ್ರಾಮಾವನ್ನೇ ಸೃಷ್ಟಿಸಿದರು. ಬಳಿಕ ಗೇಟ್‌ನಿಂದ ತಾವೇ ಇಳಿದು ಗೇಟ್ ಮುಂಭಾಗದಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಕಳೆದ 24 ದಿನಗಳಿಂದ ಚಿರತೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ. ಹೀಗಾಗಿ ಸಾರ್ವಜನಿಕರ ಓಡಾಟಕ್ಕೆ, ಶಾಲಾ ಮಕ್ಕಳು ಶಾಲೆಗೆ ಹೋಗಲು ತೊಂದರೆ ಆಗುತ್ತಿದೆ ಎಂದು ಕಿಡಿಕಾರಿದರು.
ಅಲ್ಲದೇ ಅರಣ್ಯ ಸಚಿವ ಉಮೇಶ ಕತ್ತಿ ಈವರೆಗೆ ಒಮ್ಮೆಯೂ ಸ್ಥಳ ಪರಿಶೀಲನೆ ಮಾಡಿಲ್ಲ. ಹಾಗಾಗಿ ಚಿರತೆ ಹಿಡಿಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದ್ದು, ಸಚಿವ ಉಮೇಶ ಕತ್ತಿ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.