ಗೋಕಾಕ: ಗೋಕಾಕ್ ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಲಖನ್ ಜಾರಕಿಹೊಳಿಗೆ ಟಿಕೆಟ್ ದೊರೆತ ಹಿನ್ನೆಲೆ, ಕಾಂಗ್ರೆಸ್ ಕಾರ್ಯಕರ್ತರು ಲಖನ್ ಕಛೇರಿಗೆ ತೆರಳಿ ಅಭಿನಂದಿಸಿದರು.
ಗೋಕಾಕ್ನಿಂದ ಲಖನ್ ಜಾರಕಿಹೊಳಿಗೆ ಕಾಂಗ್ರೆಸ್ ಟಿಕೆಟ್ ಈ ವೇಳೆ ಮಾತನಾಡಿದ ಲಖನ್ ಜಾರಕಿಹೊಳಿ, ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರನಾಗಿ ಇಷ್ಟು ದಿನ ದುಡಿದು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುತ್ತಾ ಬಂದಿದ್ದೇನೆ. ಇದನ್ನು ಮನಗಂಡು ಹೈಕಮಾಂಡ್ ಮತ್ತು ಸಿದ್ದರಾಮಯ್ಯ ನನಗೆ ಟಿಕೆಟ್ ನೀಡಿದ್ದು, ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಕಳೆದ 6 ತಿಂಗಳಿನಿಂದ ಸತೀಶ್ ಜಾರಕಿಹೊಳಿ ಜೊತೆ ಪಕ್ಷ ಸಂಘಟಿಸುತ್ತಿದ್ದು, ಸತೀಶ್ ಜೊತೆಗೂಡಿ ಇನ್ನೂ ಹೆಚ್ಚಿನ ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತೇವೆ. ಜಾರಕಿಹೊಳಿ ಸಹೋದರರ ನಡುವೆ ಯಾವುದೇ ಹೊಂದಾಣಿಕೆ ಇಲ್ಲ. ಯಾರು ಇದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ಕಾಂಗ್ರೆಸ್ ಪಕ್ಷ ಗೆಲ್ಲಿಸುವುದೇ ನಮ್ಮ ಗುರಿ ಎಂದು ಹೇಳಿದರು.
ಸೋಮವಾರ ನಾಮಪತ್ರ ಸಲ್ಲಿಸುತ್ತಿದ್ದು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಮತ್ತು ತಾಲೂಕಿನ ಜನತೆ ಕಾಂಗ್ರೆಸ್ಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿಕೊಂಡರು.
ಅಭಿಮಾನಿಗಳಿಂದ ಸಂಭ್ರಮಾಚರಣೆ: ಲಖನ್ ಜಾರಕಿಹೊಳಿಗೆ ಕಾಂಗ್ರೆಸ್ ಟಿಕೆಟ್ ದೊರೆತ ಹಿನ್ನೆಲೆ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದರು. ಟಿಕೆಟ್ ಘೋಷಣೆಯಾಗುತ್ತಿದ್ದಂತೆ ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ಕೈ ಕಾರ್ಯಕರ್ತರು ಮತ್ತು ಲಖನ್ ಅಭಿಮಾನಿಗಳು, ಸಿದ್ದರಾಮಯ್ಯ , ಸತೀಶ್ ಜಾರಕಿಹೊಳಿ ಪರ ಘೋಷಣೆ ಕೂಗಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ಅಶೋಕ್ ಪೂಜಾರಿಯೂ ಆಕಾಂಕ್ಷಿ: ತೀವ್ರ ಕುತೂಹಲ ಮೂಡಿಸಿದ ಟಿಕೆಟ್ ಹಂಚಿಕೆ ವಿಚಾರವಾಗಿ ಒಂದು ಕಡೆ ಕಾಂಗ್ರೆಸ್ನಿಂದ ಅಶೋಕ್ ಪೂಜಾರಿ ಕೂಡ ಟಿಕೆಟ್ ಆಕಾಂಕ್ಷಿ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಪೂಜಾರಿಗೆ ಟಿಕೆಟ್ ಕೊಡಿಸಲು ಕಾಂಗ್ರೆಸ್ನ ಪ್ರಬಲ ನಾಯಕರು ಲಾಬಿ ನಡೆಸಿದ್ದರು. ಆದರೆ ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಟಿಕೆಟ್ ನೀಡುವ ವಿಚಾರವಾಗಿ ಸಿದ್ದರಾಮಯ್ಯ ಮುಂದೆ ಅಸಮಾಧಾನ ಹೊರಹಾಕಿದ್ದರು. ಸದ್ಯ ಲಖನ್ ಜಾರಕಿಹೊಳಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಅಶೋಕ್ ಪೂಜಾರಿ ನಡೆ ಇನ್ನೂ ನಿಗೂಢವಾಗಿ ಉಳಿದಿದೆ.