ಬೆಂಗಳೂರು:ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಬಹುನಿರೀಕ್ಷಿತ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. 43 ಅಭ್ಯರ್ಥಿಗಳನ್ನು ಹೆಸರನ್ನು ಅಖೈರು ಮಾಡಲಾಗಿದ್ದು, ಇನ್ನೂ 15 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಬಾಕಿ ಉಳಿಸಿಕೊಂಡಿದೆ. ವರುಣ ಜೊತೆಗೆ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಬಯಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಟಿಕೆಟ್ ನೀಡಲಾಗಿಲ್ಲ. ಕೋಲಾರದಿಂದ ಕೊತ್ತೂರು ಜಿ.ಮಂಜುನಾಥ್ಗೆ ಟಿಕೆಟ್ ನೀಡಲಾಗಿದೆ.
ಮೂರನೇ ಪಟ್ಟಿಯಲ್ಲಿ ಬೆಂಗಳೂರಿನ ಪುಲಕೇಶಿ ನಗರ, ಸಿವಿ ರಾಮನ್ ನಗರ, ಮುಳಬಾಗಿಲು, ರಾಯಚೂರು ನಗರ, ಶಿಗ್ಗಾಂವ್, ಶ್ರವಣಬೆಳಗೊಳ, ಅರಕಲಗೂಡು, ಲಿಂಗಸುಗೂರು, ಹುಬ್ಬಳ್ಳಿ ಧಾರವಾಡ ಕೇಂದ್ರ, ಹುಬ್ಬಳ್ಳಿ ಧಾರವಾಡ ಪಶ್ಚಿಮ, ಮಂಗಳೂರು ಉತ್ತರ, ಶಿಡ್ಲಘಟ್ಟ, ಚಿಕ್ಕಮಗಳೂರು, ಕೆ.ಆರ್ ಪುರಂ ಹಾಗೂ ಹರಿಹರ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ.
ನಾಲ್ಕು ಶಾಸಕರಿಗೆ ಟಿಕೆಟ್ ಪೆಂಡಿಂಗ್ :ಹರಿಹರ ಹಾಲಿ ಶಾಸಕ ರಾಮಪ್ಪ, ಪುಲಕೇಶಿ ನಗರ ಹಾಲಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ, ಶಿಡ್ಲಘಟ್ಟ ಹಾಲಿ ಶಾಸಕ ವಿ. ಮುನಿಯಪ್ಪ, ಲಿಂಗಸುಗೂರು ಹಾಲಿ ಶಾಸಕ ಡಿ.ಎಸ್ ಹೂಲಗೇರಿ ಅವರಿಗೆ ಟಿಕೆಟ್ ನೀಡದೆ ಹಾಗೆಯೇ ಉಳಿಸಿಕೊಳ್ಳಲಾಗಿದೆ.
ನಟಿ ಉಮಾಶ್ರೀಗೆ ನಿರಾಸೆ : ತೇರದಾಳದಿಂದ ಹಿರಿಯ ನಟಿ, ಕಾಂಗ್ರೆಸ್ ನಾಯಕಿ ಉಮಾಶ್ರೀ ಹಾಗೂ ದೇವರಹಿಪ್ಪರಗಿಯಿಂದ ವಿಧಾನಪರಿಷತ್ ಮಾಜಿ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಅವರಿಗೆ ನಿರಾಸೆ ಉಂಟಾಗಿದೆ.
ವಲಸಿಗರಿಗೆ ಮಣೆ : ಮೂರನೇ ಪಟ್ಟಿಯಲ್ಲಿ ವಲಸಿಗರಿಗೆ ಕಾಂಗ್ರೆಸ್ ಮಣೆ ಹಾಕಲಾಗಿದೆ. ನಿನ್ನೆಯಷ್ಟೇ ಕಾಂಗ್ರೆಸ್ ಸೇರಿರುವ ಲಕ್ಷ್ಮಣ ಸವದಿಗೆ ಅಥಣಿ, ಅರಸೀಕೆರೆ ಕ್ಷೇತ್ರದಿಂದ ಶಿವಲಿಂಗೇಗೌಡ, ನವಲಗುಂದ ಕ್ಷೇತ್ರದಿಂದ ಕೋನರಡ್ಡಿ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಜಗದೀಶ್ ಶೆಟ್ಟರ್ ಪ್ರತಿನಿಧಿಸುವ ಹುಬ್ಬಳ್ಳಿ ಕೇಂದ್ರ ಕ್ಷೇತ್ರವನ್ನು ಕಾಂಗ್ರೆಸ್ ಬಾಕಿ ಉಳಿಸಿಕೊಂಡಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಒಂದೊಮ್ಮೆ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರುತ್ತಾರಾ? ಎಂಬ ಅನುಮಾನವೂ ಶುರುವಾಗಿದೆ. ಬಿಜೆಪಿಯಿಂದ ಟಿಕೆಟ್ ಮಿಸ್ ಆದರೆ ಕಾಂಗ್ರೆಸ್ನತ್ತ ಸೆಳೆಯಬಹುದು ಎಂಬ ಚಿಂತನೆ ಹಿನ್ನೆಲೆಯಲ್ಲಿ ಈ ಕ್ಷೇತ್ರವನ್ನು ಬಾಕಿ ಉಳಿಸಲಾಗಿದೆ.
ಹಾಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿಗೆ ಮೂರನೇ ಪಟ್ಟಿಯಲ್ಲೂ ಅವಕಾಶ ಸಿಕ್ಕಿಲ್ಲ. ಪುಲಿಕೇಶಿ ನಗರ ಕ್ಷೇತ್ರವನ್ನು ಕಾಂಗ್ರೆಸ್ ಮೂರನೇ ಪಟ್ಟಿಯಲ್ಲೂ ಪ್ರಕಟಿಸಿಲ್ಲ. ಮದ್ದೂರಿನಿಂದ ಗುರುಚರಣ್ (ಎಸ್ಎಂ ಕೃಷ್ಣ ಅಳಿಯ) ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಟಿಕೆಟ್ ಲಭಿಸಿಲ್ಲ. ಬಳ್ಳಾರಿ ನಗರದಲ್ಲಿ ನಾರಾ ಭರತ್ ರೆಡ್ಡಿ ವಿರುದ್ಧ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಅವರಿಗೆ ಟಿಕೆಟ್ ನೀಡಲಾಗಿದೆ. ಕುಮಟಾದಿಂದ ನಿರೀಕ್ಷೆಯಂತೆ ನಿವೇದಿತಾ ಆಳ್ವ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.
ನಾಲ್ಕನೇ ಪಟ್ಟಿಯು ಆದಷ್ಟು ಶೀಘ್ರ ಬಿಡುಗಡೆ ಆಗಲಿದೆ ಎಂಬ ಮಾಹಿತಿ ಇದೆ. ಬಿಜೆಪಿಯ ರೆಬೆಲ್ ನಾಯಕರ ಮೇಲೆ ನಿರೀಕ್ಷೆ ಇಟ್ಟುಕೊಂಡು ನಾಲ್ಕನೇ ಪಟ್ಟಿಯನ್ನು ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಹೊನ್ನಾಳಿಯಿಂದ ಶಾಂತನಗೌಡಗೆ ಟಿಕೆಟ್ ನೀಡಲಾಗಿದೆ. ಮೂಡಿಗೆರೆಯಿಂದ ನಯನಾ ಮೋಟಮ್ಮಾಗೆ ಟಿಕೆಟ್ ನೀಡಬಾರದು ಎಂದು ಹಲವು ನಾಯಕರು ಸ್ಥಳೀಯವಾಗಿ ಚರ್ಚೆ ನಡೆಸಿದ್ದರು, ಆದರೆ ನಯನಾಗೆ ಅವಕಾಶ ನೀಡಲಾಗಿದೆ.
ಚಿಕ್ಕಮಗಳೂರು ಕ್ಷೇತ್ರದಲ್ಲಿ ಶಾಸಕ ಸಿಟಿ ರವಿ ವಿರುದ್ಧ ಇದುವರೆಗೂ ಅಭ್ಯರ್ಥಿಯನ್ನು ಕಾಂಗ್ರೆಸ್ ಕಣಕ್ಕಿಳಿಸಿಲ್ಲ. ಡಿಸಿ ತಮ್ಮಯ್ಯ ಅಲ್ಲಿ ತಾವೇ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಅವರಿಗೆ ಇನ್ನೂ ಪ್ರಕಟಿಸಿಲ್ಲ. ಅರಕಲಗೂಡಿನಲ್ಲಿ ಸಹ ಟಿಕೆಟ್ ಘೋಷಣೆ ಆಗಿಲ್ಲ. ಕೃಷ್ಣೆಗೌಡರ ಪರ ಸಿದ್ದರಾಮಯ್ಯ ಹಾಗೂ ಶ್ರೀಧರ್ ಗೌಡರ ಪರ ಡಿ.ಕೆ ಶಿವಕುಮಾರ್ ಲಾಬಿ ನಡೆಸಿದ್ದು, ಇದುವರೆಗೂ ಯಾರಿಗೆ ಟಿಕೆಟ್ ನೀಡಬೇಕು ಎಂಬುದು ಅಂತಿಮವಾಗಿಲ್ಲ.
ಚಿಕ್ಕಪೇಟೆಯಿಂದ ಆರ್ ವಿ ದೇವರಾಜ್ಗೆ ಟಿಕೆಟ್ ನೀಡಲಾಗಿದ್ದು, ಇಲ್ಲಿನ ಟಿಕೆಟ್ಗಾಗಿ ಕೆಜಿಎಫ್ ಬಾಬು ಹಾಗೂ ಮಾಜಿ ಮೇಯರ್ ಗಂಗಾಂಬಿಕೆ ಸ್ಪರ್ಧೆ ನಡೆಸಿದ್ದರು. ಆರ್.ವಿ ದೇವರಾಜ್ ಸಹ ತಮ್ಮ ಬದಲು ತಮ್ಮ ಪುತ್ರ ಆರ್.ವಿ ಯುವರಾಜ್ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು. ಅಂತಿಮವಾಗಿ ಕಾಂಗ್ರೆಸ್ ದೇವರಾಜ್ಗೆ ಮಣೆ ಹಾಕಿದೆ.
ಹರಿಹರ ವಿಧಾನಸಭೆ ಕ್ಷೇತ್ರವನ್ನು ಸಹ ಕಾಂಗ್ರೆಸ್ ಬಾಕಿ ಉಳಿಸಿಕೊಂಡಿದೆ. ಹಾಲಿ ಶಾಸಕ ರಾಮಪ್ಪಗೆ ಟಿಕೆಟ್ ನೀಡುತ್ತಾರೋ, ಇಲ್ಲವೋ ಎನ್ನುವುದು ಇನ್ನೂ ಅನುಮಾನವಾಗಿಯೇ ಉಳಿದಿದೆ. ಪುಲಕೇಶಿನಗರದಿಂದ ಹಾಲಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಗೆ ಈ ಪಟ್ಟಿಯಲ್ಲಿ ಟಿಕೆಟ್ ಘೋಷಣೆ ಆಗಿಲ್ಲ, ಅದನ್ನು ಬಾಕಿ ಉಳಿಸಿಕೊಳ್ಳಲಾಗಿದೆ.
ಓದಿ:ಲಂಚ ಪ್ರಕರಣ: ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಜಾಮೀನು ಮಂಜೂರು