ಚಿಕ್ಕೋಡಿ: ಮೊನ್ನೆ ನಡೆದ 17 ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ 14 ಕ್ಷೇತ್ರ ಬಿಜೆಪಿ ಗೆದ್ದಿತ್ತು. 28 ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದು ಕೇವಲ ಒಂದೇ ಒಂದು ಸ್ಥಾನವನ್ನು. ಹೀಗಾಗಿ, ಕಾಂಗ್ರೆಸ್ ಮುಳುಗುವ ಹಡಗು ಎಂದು ಸಿಎಂ ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಮೂಡಲಗಿಯಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಹಗುರವಾಗಿ ಮಾತನಾಡಿ ಓಡಾಡುತ್ತಿದ್ದರೆ ಕಾಂಗ್ರೆಸ್ ಇನ್ನೂ ದಯನೀಯ ಸ್ಥಿತಿಗೆ ಹೋಗುತ್ತೆ. ನಾವು ಬೆಳಗಾವಿ ಲೋಕಸಭಾ ಕ್ಷೇತ್ರ ಹಾಗೂ ಎರಡೂ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲುತ್ತೇವೆ. ಯಡಿಯೂರಪ್ಪ ಏನಾದರೂ ಹೇಳಿದ್ರೆ, ಅದನ್ನು ಹತ್ತಾರು ಬಾರಿ ಯೋಚನೆ ಮಾಡಿರಲಾಗುತ್ತೆ. ಕೇವಲ ಪ್ರಚಾರಕ್ಕೆ ಮಾತನಾಡಲ್ಲ ಎಂದರು.
ಸುರೇಶ್ ಅಂಗಡಿ ರೈಲ್ವೆ ಸಚಿವರಾಗಿ ಮಾಡಿದ ಕೆಲಸವನ್ನು ನಮ್ಮ ಜೀವನದಲ್ಲೇ ಮರೆಯಲು ಸಾಧ್ಯವಿಲ್ಲ. ನರೇಂದ್ರ ಮೋದಿ ಸಹ ಸುರೇಶ್ ಅಂಗಡಿ ನಿಧನರಾದಾಗ ಕಣ್ಣೀರಿಟ್ಟಿದ್ರು, ಮಂಗಳಾ ಅಂಗಡಿ ಅವರನ್ನು ನಾಲ್ಕು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.