ಕರ್ನಾಟಕ

karnataka

ETV Bharat / state

ಗೋಕಾಕ್: ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್​ನಿಂದ ಬೃಹತ್ ಪ್ರತಿಭಟನೆ - ಸರ್ಕಾರದ ನೀತಿಗಳ ವಿರುದ್ಧ ಗೋಕಾಕ್​ನಲ್ಲಿ ಪ್ರತಿಭಟನೆ

ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಬೆಳಗಾವಿಯ ಗೋಕಾಕ್ ಮತ್ತು ಅರಭಾವಿ ಬ್ಲಾಕ್ ಕಾಂಗ್ರೆಸ್​ ಕಾರ್ಯಕರ್ತರು ಬೃಹತ್​ ಪ್ರತಿಭಟನೆ ನಡೆಸಿದರು.

Congress protest against Govt in Belgavi
ಬೆಳಗಾವಿಯಲ್ಲಿ ಕಾಂಗ್ರೆಸ್​ನಿಂದ ಪ್ರತಿಭಟನೆ

By

Published : Feb 24, 2021, 4:37 PM IST

ಬೆಳಗಾವಿ: ರೈತ ವಿರೋಧಿ ಕಾನೂನುಗಳು, ಪೆಟ್ರೋಲ್, ಡೀಸೆಲ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಗೋಕಾಕ್ ಹಾಗೂ ಅರಭಾವಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಗೋಕಾಕ್ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಎತ್ತಿನ ಬಂಡಿಯ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿತು. ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯ ವಿರುದ್ಧ ಸಾವಿರಾರು ಕಾರ್ಯಕರ್ತರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಗೋಕಾಕ್​ನಲ್ಲಿ ಕಾಂಗ್ರೆಸ್​ನಿಂದ ಪ್ರತಿಭಟನೆ

ಪ್ರಿಯಾಂಕಾ-ರಾಹುಲ್ ಭಾಗಿ:ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಸೂಚನೆಯ ಮೇರೆಗೆ ಯುವ ಮುಖಂಡರಾದ ಪ್ರಿಯಾಂಕಾ ಜಾರಕಿಹೊಳಿ ಹಾಗೂ ರಾಹುಲ್ ಜಾರಕಿಹೊಳಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ಪ್ರಿಯಾಂಕಾ ಹಾಗೂ ರಾಹುಲ್ ಅವರು ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯ ಉದ್ದಕ್ಕೂ ಕಾರ್ಯಕರ್ತರನ್ನು ಹುರಿದುಂಬಿಸಿದರು. ರಾಹುಲ್ ಜಾರಕಿಹೊಳಿ ಸ್ವತಃ ಎತ್ತಿನಬಂಡಿ ಓಡಿಸುವ ಮೂಲಕ ಗಮನ ಸೆಳೆದರು. ಪ್ರಿಯಾಂಕಾ ಹಾಗೂ ರಾಹುಲ್ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ನೂರಾರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಮುಗಿಬಿದ್ದರು.

ಬಡವರು-ರೈತ ವಿರೋಧಿ ಸರ್ಕಾರ:ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಕಾಂಗ್ರೆಸ್​ಬೆಳಗಾವಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ದಿನೇ ದಿನೆ ಏರುತ್ತಲೇ ಸಾಗಿದ್ದು, ಜನಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸುತ್ತಿದೆ. ಇಂಧನ ದರ ಏರುತ್ತಿರುವುದರಿಂದ ದಿನ ಬಳಕೆಯ ವಸ್ತುಗಳ ಬೆಲೆಯೂ ಹೆಚ್ಚುತ್ತಿದೆ. ಕೇಂದ್ರ ಸರ್ಕಾರ ಜನಸಾಮಾನ್ಯರ ಜೀವನದ ಬಗ್ಗೆ ಗಮನಹರಿಸದೆ ಉದ್ಯಮಿಗಳ ಲಾಭವನ್ನಷ್ಟೇ ನೋಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಸರ್ಕಾರಗಳು ಯಾವಾಗಲೂ ರೈತರ ಪರವಾಗಿರಬೇಕು. ಆದರೆ ಈಗಿನ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತ ವಿರೋಧಿಯಾಗಿವೆ. ರೈತರಿಗೆ ನೆರವಾಗುವ ಕಾನೂನಿನ ಬದಲು, ಉದ್ಯಮಿಗಳಿಗೆ ಅನುಕೂಲವಾಗುವ ಕಾನೂನುಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿದೆ. ರೈತ ವಿರೋಧಿ ಕೃಷಿ ಕಾನೂನುಗಳನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಬಳಿಕ ಪ್ರತಿಭಟನಾನಿರತರು ತಹಶೀಲ್ದಾರ್ ಮೂಲಕ ಪ್ರಧಾನಿ, ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

For All Latest Updates

ABOUT THE AUTHOR

...view details