ಬೆಳಗಾವಿ:ಕಾಂಗ್ರೆಸ್ ಪಕ್ಷ ಯಾವತ್ತಿಗೂ ಜಾತಿ ರಾಜಕಾರಣ ಮಾಡುವುದಿಲ್ಲ. ಸರ್ವಧರ್ಮ, ಸರ್ವರಿಗೆ ಸಮಪಾಲು ಎಂಬ ತತ್ವದಡಿ ಕಾಂಗ್ರೆಸ್ ಪಕ್ಷ ನಿಂತಿದೆ. ಅದರಡಿ ಜನರ ಬಳಿ ಹೋಗುತ್ತೇವೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಲೋಕಸಭೆ ಉಪಚುನಾವಣೆ ಯಾರೂ ಬಯಸದೇ ಬಂದಿರುವ ಚುನಾವಣೆ. ಇದು ಸಾಮಾನ್ಯ ಚುನಾವಣೆ ಅಲ್ಲ. ಅನಿವಾರ್ಯ ಪರಿಸ್ಥಿತಿಯಲ್ಲಿ ಬಂದಿರುವ ಚುನಾವಣೆ ಆಗಿದ್ದರಿಂದ ಎದುರಿಸಲೇಬೇಕು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸತೀಶ್ ಅಣ್ಣಾ ಜಾರಕಿಹೊಳಿ ಇದ್ದಾರೆ. ಅವರು ಒಳ್ಳೆಯ ನಾಯಕರು. ಜಿಲ್ಲೆಯಲ್ಲಿ ಅವರದ್ದೇ ಆದ ಸಂಘಟನೆ, ಸಮಾಜ ಸೇವೆ ಇದ್ದು, ಅವರ ಸಂಘಟನೆ ಅನುಭವ ನಮ್ಮ ಪಕ್ಷಕ್ಕೆ ಲಾಭ ತಂದುಕೊಡಲಿದೆ ಎಂದರು.
ಇದನ್ನೂ ಓದಿ: ಬೆಳಗಾವಿ ಉಪಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಗೆಲ್ಲುತ್ತೇನೆ: ಸತೀಶ್ ಜಾರಕಿಹೊಳಿ ವಿಶ್ವಾಸ
ಐದು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂಬ ಬಿಜೆಪಿ ಹೇಳಿಕೆಗೆ, ಮೇ 2ರ ನಂತರ ಉತ್ತರ ಸಿಗಲಿದೆ. ಈ ಚುನಾವಣೆ ಸೂಕ್ಷ್ಮ ಆಗಿರುವುದರಿಂದ ಗಟ್ಟಿತನದಿಂದ ಮಾತನಾಡಬೇಕಾಗುತ್ತದೆ. ಯಾರ ಮನಸಿಗೆ ನೋವು ಮಾಡಲಿಕ್ಕೆ ನಾವು ಹೋಗುವುದಿಲ್ಲ. ಯಾರನ್ನೋ ಮೆಚ್ಚಿಸಲು ಹೋಗಿ, ಇನ್ಯಾರದೋ ಮನಸಿಗೆ ನೋವು ಮಾಡುವುದಿಲ್ಲ. ಕಾಂಗ್ರೆಸ್ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಿದೆ. ಸತೀಶ್ ಅವರ ನಾಯಕತ್ವ ಕೂಡ ಪಕ್ಷಕ್ಕೆ ಬಹಳ ಮುಖ್ಯವಾಗಲಿದ್ದು, ಗೆಲ್ಲಲಿಕ್ಕೂ ಅನುಕೂಲವಾಗಲಿದೆ. ಕಾಂಗ್ರೆಸ್ ಪಕ್ಷ ಯಾವತ್ತಿಗೂ ಜಾತಿ ರಾಜಕಾರಣ ಮಾಡುವುದಿಲ್ಲ. ಸರ್ವಧರ್ಮ, ಸರ್ವರಿಗೆ ಸಮಪಾಲು ಎಂಬ ತತ್ವದಡಿ ಕಾಂಗ್ರೆಸ್ ಪಕ್ಷ ನಿಂತಿದೆ ಎಂದರು.