ಬೆಳಗಾವಿ/ಬೆಂಗಳೂರು: "ನನ್ನ ಸುದೀರ್ಘ ರಾಜಕಾರಣದಲ್ಲಿ ಯಾವತ್ತೂ ಪ್ರತಿಪಕ್ಷಗಳಿಂದ ನನಗೆ ತೊಂದರೆ ಆಗಿಲ್ಲ. ಇಡಿ, ಐಟಿ ಮೂಲಕ ತೊಂದರೆ ನೀಡಿಲ್ಲ. ಆದರೆ ಜೊತೆಯಲ್ಲಿರುವ ಸ್ನೇಹಿತರೇ ಬೆನ್ನಿಗೆ ಚೂರಿ ಹಾಕಿದಾಗ ನೋವಾಗಿದೆ. ಅದನ್ನು ತಡೆದುಕೊಂಡಿರುವುದೇ ದೊಡ್ಡದು" ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು. "ಸದನವನ್ನು ನಡೆಸಿದ ಸುದೀರ್ಘ ಅನುಭವ ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗಿದೆ. 40 ವರ್ಷ ಕಾಂಗ್ರೆಸ್ ವಿರುದ್ಧವಾಗಿದ್ದರೂ ಸದನದಲ್ಲಿ ಪ್ರಜಾಪ್ರಭುತ್ವ, ಸಂವಿಧಾನದ ತಿರುಳನ್ನು ನೀವು ಎತ್ತಿ ಹಿಡಿದಿದ್ದೀರಿ, ಅದಕ್ಕಾಗಿ ಧನ್ಯವಾದಗಳು" ಎಂದರು.
"ನಾನು ಪ್ರತಿಪಕ್ಷ ನಾಯಕನಾಗಿದ್ದಾಗ ನನಗೆ ಬಿಜೆಪಿಯವರೆಲ್ಲರೂ ಸಹಕಾರ ಕೊಟ್ಟಿದ್ದರು. ಹಾಗಾಗಿ ಅವರಿಗೂ ಧನ್ಯವಾದ ಸಲ್ಲಿಸುತ್ತೇನೆ" ಎಂದು ಹೇಳಿದರು. ಮಾತು ಮುಂದುವರೆಸಿದ ಅವರು, "ಇಲ್ಲಿನ ಕೆಲವರ ಬಗ್ಗೆ ಒಳ್ಳೆಯ ಗೌರವ ಇದೆ. ಮರಿತಿಬ್ಬೇಗೌಡರನ್ನು ಗುರು ಎಂದು ಒಪ್ಪಿಕೊಂಡಿದ್ದೇನೆ" ಎಂದರು. ಮೊದಲ ಸಾಲಿನಲ್ಲಿದ್ದ ಹರಿಪ್ರಸಾದ್ ಕಡೆಯ ಸಾಲಿಗೆ ಹೋಗಿದ್ದಾರೆ ಎನ್ನುವ ಬಿಜೆಪಿ, ಜೆಡಿಎಸ್ ಸದಸ್ಯರ ಹೇಳಿಕೆ ಉಲ್ಲೇಖಿಸಿ ಮಾತನಾಡುತ್ತಾ, "ನಾನು ಪೊಲಿಟಿಕಲ್ ಆ್ಯಕ್ಟಿವಿಸ್ಟ್ ಅಷ್ಟೇ ವ್ಯಾಪಾರಸ್ಥ ಅಲ್ಲ" ಎಂದು ಟಾಂಗ್ ಕೊಟ್ಟರು.
"ರಾಜಕೀಯ ನಿಂತ ನೀರಲ್ಲ, ಹರಿಯುತ್ತಾ ಹೋಗಲಿದೆ. ರಾಜ್ಯಸಭೆಯಲ್ಲಿ ದೊಡ್ಡವರು ಮಾತನಾಡುವಾಗ ಕೇಳಿಕೊಂಡು ಕಲಿಯುತ್ತಿದ್ದೆವು. ಇಲ್ಲಿಯೂ ಹೊರಟ್ಟಿ, ಮರಿತಿಬ್ಬೇಗೌಡರಿಂದ ಕಲಿಯುವುದಿದೆ. ಇಲ್ಲಿ ನಾನು ಮಾತನಾಡುವಾಗ ಯಾರ ವಿರುದ್ಧ ವೈಯಕ್ತಿಕವಾಗಿ ಮಾತನಾಡಿಲ್ಲ. ಅಂತಹ ಉದ್ದೇಶವೂ ಇರಲಿಲ್ಲ. ಆದರೆ ಮಾತಿನ ಭರಾಟೆಯಲ್ಲಿ ಬಿಜೆಪಿ ಸದಸ್ಯ ರವಿಕುಮಾರ್ ವಿರುದ್ಧ ಕೆಲವು ಬಾರಿ ಟೀಕಿಸಿದ್ದೇನೆ. ಅವರಿಗೆ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ" ಎಂದರು.