ಬೆಳಗಾವಿ: ಮೂರು ರಾಜ್ಯಗಳ ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಕೈ ಎಂಎಲ್ಎಗಳಿಗೆ ಅಭದ್ರತೆ ಇದೆ. ಹೆಚ್ಡಿಕೆ ಅವರು ಸರಿಯಾದ ದಾಖಲೆ ಹಾಗೂ ಮಾಹಿತಿ ಇಟ್ಟುಕೊಂಡೇ ಮಾತನಾಡುತ್ತಾರೆ ಎಂದು ಹೆಚ್ಡಿಕೆ ಅವರ ಶೀಘ್ರದಲ್ಲೇ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ, ಪ್ರಭಾವಿ ಸಚಿವರೊಬ್ಬರು 50- 60 ಮಂದಿ ಶಾಸಕರ ಕರೆದುಕೊಂಡು ಕಾಂಗ್ರೆಸ್ನಿಂದ ಹೊರಗೆ ನಡೆಯುತ್ತಾರೆ ಎನ್ನುವ ಹೇಳಿಕೆಗೆ ವಿಪಕ್ಷ ನಾಯಕ ಆರ್.ಅಶೋಕ್ ಪೂರಕವಾಗಿ ಪ್ರತಿಕ್ರಿಯೆ ನೀಡಿದರು.
ಸುವರ್ಣಸೌಧಲ್ಲಿ ಮಾತನಾಡಿದ ಅವರು, ಹೆಚ್ಡಿಕೆಗೆ ಸರ್ಕಾರ ಮಾಡಿರೋದು ಗೊತ್ತಿದೆ, ಬಿದ್ದಿರೋದು ಗೊತ್ತಿದೆ. ಕುಮಾರಸ್ವಾಮಿ ಸರ್ಕಾರ ನಡೆಸಿಯೂ ಗೊತ್ತಿದೆ. ಅವರ ಹೇಳಿಕೆಯಲ್ಲಿ ಸರಿಯಾದ ದಾಖಲೆ, ಮಾಹಿತಿ ಇರುತ್ತದೆ. ಸರ್ಕಾರ ರಚನೆಯಾಗಿ ಆರು ತಿಂಗಳು ಕಳೆದರೂ ಶಾಸಕರಿಗೆ ಅನುದಾನ ಕೊಟ್ಟಿಲ್ಲ, ಇದರಿಂದ ಅಭಿವೃದ್ಧಿ ಕುಂಠಿತವಾಗಿದೆ. ಎರಡು ಸಾವಿರ ಕೊಡುತ್ತೇವೆ ಎಂದು ಮೊಸಳೆ ಕಣ್ಣೀರು ಹಾಕಿದ್ದಾರೆ. ಇವೆಲ್ಲವೂ ಕುಮಾರಸ್ವಾಮಿ ಹೇಳಿಕೆಗೆ ಲಿಂಕ್ ಆಗ್ತಿದೆ ಎಂದು ಹೇಳಿದರು.
ಬುಧವಾರ ಪ್ರತಿಭಟನೆ:ಬುಧವಾರ ಸಂಜೆ ಬೆಳಗಾವಿಯಲ್ಲಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಬರ, ಜಮೀರ್ ಅವರ ಸ್ಪೀಕರ್ ಬಗೆಗಿನ ಹೇಳಿಕೆ ಹಾಗೂ ಡಿಕೆಶಿ ಕೇಸ್ ವಾಪಸ್ ವಿಚಾರವಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಇದೇ ವೇಳೆ ತಿಳಿಸಿದರು.
ಮಂಗಳವಾರ ಬಿಜೆಪಿ ಶಾಸಕಾಂಗ ಸಭೆ:ಮಂಗಳವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದೇವೆ. ಮುಂದಿನ ನಡೆ ಬಗ್ಗೆ ಈ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಸದನದಲ್ಲಿ ಯಾವ ವಿಚಾರದ ಬಗ್ಗೆ ಪ್ರಸ್ತಾಪ ಮಾಡಬೇಕು ಎಂದು ಜೆಡಿಎಸ್ ಜೊತೆಯೂ ಚರ್ಚೆ ಮಾಡಿದ್ದೇವೆ. ಬರಗಾಲದ ಕುರಿತು ಚರ್ಚೆ ಆಗಿದೆ. ಉ.ಕ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತೇವೆ. ಭ್ರೂಣಹತ್ಯೆ ಬಗ್ಗೆ ಚರ್ಚೆಗೆ ನಿಲುವಳಿ ಸೂಚನೆ ಕೊಟ್ಟಿದ್ದೇವೆ. ಜಮೀರ್ ಅಹ್ಮದ್ ಬಿಜೆಪಿ ಶಾಸಕರಿಗೆ ಅವಮಾನ ಮಾಡಿದ ವಿಚಾರವನ್ನು ಇವತ್ತು ಹಾಗೂ ನಾಳೆ ತೆಗೆದುಕೊಳ್ಳಲಿದ್ದೇವೆ ಎಂದರು.