ಕರ್ನಾಟಕ

karnataka

ETV Bharat / state

ಕಾಂಗ್ರೆಸ್​ ಪಕ್ಷಕ್ಕೆ ಬಿಜೆಪಿ, ಜೆಡಿಎಸ್​ ಶಾಸಕರ ಅವಶ್ಯಕತೆ ಇಲ್ಲ: ಬಾಲಚಂದ್ರ ಜಾರಕಿಹೊಳಿ - ಈಟಿವಿ ಭಾರತ ಕರ್ನಾಟಕ

ನೀವು ಸುಮ್ಮನಿರದಿದ್ದರೆ ಬಿಜೆಪಿ, ಜೆಡಿಎಸ್ ಶಾಸಕರನ್ನು ಪಕ್ಷಕ್ಕೆ ಕರೆ ತರುತ್ತೇವೆಂದು ಕಾಂಗ್ರೆಸ್​ ನಾಯಕರು ತಮ್ಮ ಶಾಸಕರಿಗೆ ಹೆದರಿಸುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಆರೋಪಿಸಿದರು.

congress-leaders-are-scaring-their-mlas-through-operation-hasta-says-balachandra-jarakiholi
ಕಾಂಗ್ರೆಸ್​ ನಾಯಕರು ಆಪರೇಷನ್​ ಹಸ್ತದ ಮೂಲಕ ತಮ್ಮ ಶಾಸಕರನ್ನು ಹೆದರಿಸುತ್ತಿದ್ದಾರೆ: ಬಾಲಚಂದ್ರ ಜಾರಕಿಹೊಳಿ

By ETV Bharat Karnataka Team

Published : Aug 22, 2023, 6:48 PM IST

ಬೆಳಗಾವಿ: "ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ, ಜೆಡಿಎಸ್​ನ ಯಾವೊಬ್ಬ ಶಾಸಕರ ಅವಶ್ಯಕತೆಯೂ ಇಲ್ಲ. ಆದರೆ ಅವರ ಪಕ್ಷದಲ್ಲಿ ನಡೆದಿರುವ ಪತ್ರ ಸಮರ, ಅಸಮಾಧಾನ ಶಮನಗೊಳಿಸಲು, ಆಪರೇಷನ್​ ಹಸ್ತದ ಮೂಲಕ ತಮ್ಮ ಶಾಸಕರನ್ನು ಹೆದರಿಸುತ್ತಿದ್ದಾರೆ" ಎಂದು ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಆರೋಪಿಸಿದರು.

ನಗರದ ಕೆಎಂಎಫ್ ಸಭಾಂಗಣದಲ್ಲಿ ಇಂದು ಮಾಧ್ಯಮದವರೊಂದಿಗೆ ಅವರು, "ನೀವು ಸುಮ್ಮನಿರದಿದ್ದರೆ ಬಿಜೆಪಿ, ಜೆಡಿಎಸ್ ಶಾಸಕರನ್ನು ಕರೆ ತರುತ್ತೇವೆಂದು ಹೆದರಿಸುತ್ತಿದ್ದಾರೆ. ಅವರೊಳಗೆ ಅಸಮಾಧಾನ, ಪತ್ರ ಸಮರ ನಡೆದಿದೆ. ಹೋದ ಬಾರಿ ಕುಮಾರಸ್ವಾಮಿ ಸರ್ಕಾರದಲ್ಲಿ ಮೊದಲ ತಿಂಗಳಲ್ಲೇ ಅಸಮಾಧಾನ ಆರಂಭವಾಗಿ ಒಂದು ವರ್ಷದ ನಂತರ ಸ್ಫೋಟವಾಗಿತ್ತು. ಆದರೆ ಈಗ ಕಾಂಗ್ರೆಸ್ ಮುಖಂಡರು ಈಗಲೇ ಎಚ್ಚೆತ್ತುಕೊಂಡು ತಮ್ಮ ಶಾಸಕರನ್ನು ಹೆದರಿಸುತ್ತಿದ್ದಾರೆ" ಎಂದರು.

ಮಹಾರಾಷ್ಟ್ರದಲ್ಲಿ ಆದಂತೆ ರಾಜ್ಯದಲ್ಲೂ ಬಿಜೆಪಿ ಕಡೆ ಅಸಮಾಧಾನಿತ ಕಾಂಗ್ರೆಸ್ ಶಾಸಕರು ಬರುತ್ತಾರಾ ಎಂಬ ಪ್ರೆಶ್ನೆಗೆ ಪ್ರತಿಕ್ರಿಯಿಸಿ, "ಕಾಂಗ್ರೆಸ್ ಪಕ್ಷಕ್ಕೆ ಜನ ಸ್ಪಷ್ಟ ಬಹುಮತ ಕೊಟ್ಟಿದ್ದಾರೆ. ಅವರು ಒಳ್ಳೆಯ ರೀತಿ ಸರ್ಕಾರ ನಡೆಸಲಿ, ಅವರಿಗೆ ತೊಂದರೆ ಕೊಟ್ಟು ನಾವ್ಯಾಕೆ ಕೆಟ್ಟು ಹೆಸರು ತಗೋಬೇಕು. ಕೊಟ್ಟ ಭರವಸೆಗಳನ್ನು ಅವರು ಈಡೇರಿಸುವ ಕೆಲಸ ಮಾಡಲಿ.‌ ವಿರೋಧ ಪಕ್ಷದಲ್ಲಿ ಕುಳಿತು ಕೆಲಸ ಮಾಡುವಂತೆ ಜನ ನಮಗೆ ಹೇಳಿದ್ದಾರೆ" ಎಂದರು.

ಆರು ತಿಂಗಳಲ್ಲಿ ಈ ಸರ್ಕಾರ ಪತನಗೊಳ್ಳುತ್ತೆ ಎಂಬ ವಿಜಯಪುರ ಶಾಸಕ ಯತ್ನಾಳ ಹೇಳಿಕೆ ಬಗ್ಗೆ ಮಾತನಾಡಿ, "ಅವರ ಲೆಕ್ಕಾಚಾರ ಏನಿದೆ ನಮಗೆ ಗೊತ್ತಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಿ. ಐದು ವರ್ಷಕ್ಕೆ ಈ ಎಲ್ಲ ಗ್ಯಾರಂಟಿ ಯೋಜನೆಗಳಿಗೆ 3 ಲಕ್ಷ ಕೋಟಿ ಬೇಕು. ಒಂದು ಬಜೆಟ್ ಹಣ ಗ್ಯಾರಂಟಿಗಳಿಗೆ ಬಳಸಬೇಕಾಗುತ್ತದೆ. ಕಾಂಗ್ರೆಸ್​ನವರಿಗೆ ದೇವರು ಒಳ್ಳೆಯದು ಮಾಡಲಿ" ಎಂದರು.

ಗೋಕಾಕ್ ಜಿಲ್ಲೆಯಾಗಬೇಕು: ಬೆಳಗಾವಿ ಜಿಲ್ಲೆ ವಿಭಜನೆ ಕೂಗು ಮತ್ತೆ ಕೇಳಿ ಬರುತ್ತಿರುವ ವಿಚಾರವಾಗಿ ಮಾತನಾಡಿ, "ಬೆಳಗಾವಿ ಜಿಲ್ಲೆ ವಿಭಜನೆ ಆಗಬೇಕು. ಸುರೇಶ ಅಂಗಡಿ ಅವರು ಇದ್ದಾಗಲೇ ನಾವೆಲ್ಲಾ ಪ್ಲಾನ್ ಮಾಡಿದ್ದೆವು. ಆಡಳಿತದ ದೃಷ್ಟಿಯಿಂದ ಜಿಲ್ಲಾ ವಿಭಜನೆ ಅನಿವಾರ್ಯತೆಯಿದೆ. ಆದರೆ ಜಿಲ್ಲೆಯ ದೊಡ್ಡ ದೊಡ್ಡ ನಾಯಕರೇ ಅಂದು ವಿಭಜನೆಯನ್ನು ವಿರೋಧಿಸಿದ್ದರು‌. ಎಲ್ಲ ವರದಿಗಳು ಗೋಕಾಕ್ ಜಿಲ್ಲೆ ಆಗಬೇಕೆಂದು ಶಿಫಾರಸು ಮಾಡಿವೆ. ಹಾಗಾಗಿ ಅದು ಆಗಲೇಬೇಕು" ಎಂದರು.

"ದೊಡ್ಡ ದೊಡ್ಡ ನಾಯಕರು ಮೇಲೊಂದು, ಒಳಗೊಂದು ಹೇಳಿಕೆ ನೀಡುತ್ತಿದ್ದರೆ ಜಿಲ್ಲೆ ಆಗುವುದಿಲ್ಲ‌. ಎಲ್ಲರೂ ಪ್ರಾಮಾಣಿಕವಾಗಿ ನಿಂತು ಆಡಳಿತ ದೃಷ್ಟಿಯಿಂದ ಜಿಲ್ಲೆಯ ವಿಭಜನೆ ಮಾಡಬೇಕು. ಇದರಲ್ಲಿ ಯಾವುದೇ ರೀತಿ ಪಾರ್ಟಿ, ಪಂಗಡ ರಾಜಕೀಯ ಮಾಡಬಾರದು. ಗೋಕಾಕ್ ಜಿಲ್ಲೆ ಆಗಬೇಕು ಎಂಬುದು ನಮ್ಮ ಆಗ್ರಹ, ಆದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ‌‌. ಇದರಲ್ಲಿ ಐದು ತಾಲೂಕುಗಳು ಬರುತ್ತವೆ" ಎಂದರು. ಲೋಕಸಭಾ ಚುನಾವಣೆ ತಯಾರಿ ಬಗ್ಗೆ ಮಾತನಾಡಿ, "ವಿಧಾನಸಭಾ ಚುನಾವಣೆಯಲ್ಲಿ ನಮಗೆ ಹಿನ್ನಡೆ ಆಗಿರಬಹುದು. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕದಿದ್ದರು. ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೋಡಿ ವೋಟ್ ಹಾಕುವುದಾಗಿ ಜನ ಹೇಳಿದ್ದಾರೆ" ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಇದನ್ನೂ ಓದಿ:ಕಾಂಗ್ರೆಸ್‌ನವರು ಘರ್​ ವಾಪ್ಸಿ ವದಂತಿ ಹಬ್ಬಿಸಿದ್ದಾರೆ: ಮಾಜಿ ಸಚಿವ ಬಿ ಸಿ ಪಾಟೀಲ್

ABOUT THE AUTHOR

...view details