ವೈರಲ್ ವಿಡಿಯೋ ಬಗ್ಗೆ ಚಿಕ್ಕೋಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಚಿಕ್ಕೋಡಿ: "ಸಾಮಾಜಿಕ ಜಾಲತಾಣಗಳಲ್ಲಿ ನಾನು ಮಾತನಾಡಿದ ವಿಡಿಯೋವೊಂದನ್ನು ತಪ್ಪಾಗಿ ತೋರಿಸುತ್ತಿದ್ದಾರೆ. ನಾನು ಮಾತನಾಡಿದ್ದು ಬಿಜೆಪಿಯವರು ಜನರಿಗೆ 500 ರೂಪಾಯಿ ಕೊಟ್ಟು ಕಾರ್ಯಕ್ರಮಕ್ಕೆ ಕರೆದುಕೊಂಡು ಬರುತ್ತಾರೆ ಅಂತ. ಆದರೆ, ಬಿಜೆಪಿಯವರು ಅದನ್ನು ಬೇರೆ ರೀತಿ ಬಿಂಬಿಸುತ್ತಿದ್ದಾರೆ" ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಭಾಗವಹಿಸಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, "ಬೆಳಗಾವಿಗೆ ಮೋದಿ ಬಂದಿದ್ದರು ಅಲ್ವಾ?, ಆಗ ಒಬ್ಬೊಬ್ಬರಿಗೆ 500 ರೂಪಾಯಿ ಕೊಟ್ಟು ಜನ ಸೇರಿಸಿದ್ದರು ಎಂದು ಹೇಳಿದ್ದೆ. ನಾವು ಮಾತನಾಡಿದ್ದು ಬಿಜೆಪಿ ಬಗ್ಗೆ. ಈಗ ಅವರು ತಮಗೆ ಹೇಗೆ ಬೇಕೋ ಆ ರೀತಿ ತೋರಿಸುತ್ತಿದ್ದಾರೆ ಅಷ್ಟೇ" ಎಂದರು.
ಬಿಜೆಪಿ ಹಂಚಿಕೊಂಡ ವೈರಲ್ ವಿಡಿಯೋ:ಸಿದ್ದರಾಮಯ್ಯ ಮಾತನಾಡಿದ್ದಾರೆ ಎನ್ನಲಾದ ವಿಡಿಯೋವನ್ನು ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ ರಾಜ್ಯ ಬಿಜೆಪಿ, "ದುಡ್ಡು ಕೊಟ್ಟು ಜನರನ್ನು ಕರೆದು ತರುವುದು, ಅವರಿಗೆಲ್ಲ ಬಿಟ್ಟಿ ಬಿಟ್ಟಿ ಭಾಗ್ಯ ಘೋಷಣೆ ಮಾಡುವುದು. ಆ ಕಡೆ ಅದೂ ಇಲ್ಲ, ಈ ಕಡೆ ಇದೂ ಇಲ್ಲ. ಕಾಂಗ್ರೆಸ್ ಕಥೆ ಈಗ ಮುಂಡಾಸು ಇಲ್ಲದಿರೋ ಮದುಮಗನ ಥರ ಆಗಿದೆ" ಎಂದು ಟೀಕಿಸಿದೆ.
ಪ್ರಜಾಧ್ವನಿಯಲ್ಲಿ ಸಿದ್ದರಾಮಯ್ಯ: "ದಿ.ಉಮೇಶ ಕತ್ತಿ ಸುದೀರ್ಘ ಕಾಲದವರೆಗೂ ಶಾಸಕ, ಸಚಿವರಾಗಿದ್ದವರು. ಆದ್ರೆ, ಹುಕ್ಕೇರಿಯಲ್ಲಿ ಅಭಿವೃದ್ಧಿಗೆ ಅವರ ಕೊಡುವೆ ಶೂನ್ಯ. ಜನರ ದಾರಿ ತಪ್ಪಿಸಿ, ಮರುಳು ಮಾಡಿ ಅಧಿಕಾರದಲ್ಲಿದ್ದರು. ಮತದಾರರು ಕಣ್ಮುಚ್ಚಿ ವೋಟ್ ಹಾಕಬೇಡಿ, ನಮ್ಮ ಕಾಲದಲ್ಲಾಗಿದ್ದ ಅಭಿವೃದ್ಧಿ ಮತ್ತು ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳ ತುಲನೆ ಮಾಡಿ. ನಾನು 165 ಭರವಸೆಗಳನ್ನು ನೀಡಿದ್ದೆ ಇವುಗಳಲ್ಲಿ 158 ಭರವಸೆಗಳನ್ನು ನಮ್ಮ ಸರ್ಕಾರ ಈಡೇರಿಸಿದೆ. ಅದೇ ಬಿಜೆಪಿಯವರು 2018ರಲ್ಲಿ 600 ಭರವಸೆಗಳನ್ನು ನೀಡಿದ್ರು, ಅವರು ಈಡೇರಿಸಿದ್ದು ಕೇವಲ 50 ಭರವಸೆಗಳನ್ನು ಮಾತ್ರ. ಭ್ರಷ್ಟಾಚಾರ, ಸುಳ್ಳು ಹೇಳುವ ಪಕ್ಷಕ್ಕೆ ಮತ್ತೆ ಮತ ಹಾಕಬೇಡಿ. ಬಡವರ, ಮಹಿಳೆಯರ, ಹಿಂದುಳಿದ ವರ್ಗಗಳ ಅಭಿವೃದ್ಧಿ ಆಗಬೇಕಂದ್ರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ" ಎಂದು ಹೇಳಿದರು.
ಇದನ್ನೂ ಓದಿ:ಸಿದ್ದರಾಮಯ್ಯ ಅವರ ವಿಡಿಯೋವನ್ನು ತಿರುಚಲಾಗಿದೆ: ಸತೀಶ್ ಜಾರಕಿಹೊಳಿ
'ಸಾಧನೆಗಳ ಬಗ್ಗೆ ಚರ್ಚೆಗೆ ಬನ್ನಿ': "ನಾನು ಸುಳ್ಳು ಹೇಳ್ತೀನಿ ಅಂತ ಸಿಎಂ ಬೊಮ್ಮಾಯಿ ಹೇಳ್ತಾರೆ. ಹಾಗಾದರೆ ನಿಮ್ಮ ಸರ್ಕಾರದ ಸಾಧನೆಗಳ ಬಗ್ಗೆ ನೀವು ಹೇಳಿ. ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ನಾನು ಚರ್ಚೆ ಮಾಡಲು ಸಿದ್ಧ. ನಿಮಗೆ ಧಮ್, ತಾಕತ್ ಇದ್ರೆ ಸಾರ್ವಜನಿಕ ಚರ್ಚೆಗೆ ಬನ್ನಿ" ಎಂದು ಬಸವರಾಜ ಬೊಮ್ಮಾಯಿ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಸವಾಲೆಸೆದರು.
ಜಮೀರ್ ಅಹ್ಮದ್ ಖಾನ್ ಭಾಷಣ: "ಬಿಜೆಪಿ ಹಿಂದೂ-ಮುಸ್ಲಿಮರ ನಡುವೆ ವೈಷಮ್ಯ ಉಂಟು ಮಾಡುತ್ತದೆ. ಹಿಂದೂ ಮುಸ್ಲಿಂ ಗಲಾಟೆ ಜೀವಂತವಾಗಿರಿಸಿ, ಜನರ ಬಳಿ ವೋಟ್ ಕೇಳ್ತಾರೆ. ಆದ್ರೆ, ಕಾಂಗ್ರೆಸ್ ಅಭಿವೃದ್ಧಿ ಕೆಲಸಗಳಿಂದ ವೋಟ್ ಕೇಳುತ್ತದೆ. ಬಿಜೆಪಿಯವರಂತೆ ಸುಳ್ಳು ಹೇಳಿ ವೋಟ್ ಕೇಳಲ್ಲ. ಅವರ ಸಾಧನೆ 40% ಕಮಿಷನ್. ಸಿದ್ದರಾಮಯ್ಯ ಅನೇಕ ಭಾಗ್ಯಗಳನ್ನು ತಂದಿದ್ದಾರೆ. ಇತಿಹಾಸದಲ್ಲಿ ಯಾವ್ಯಾವಾಗ ಕಾಂಗ್ರೆಸ್ ಅಧಿಕಾರದಲ್ಲಿತ್ತೋ ಅವಾಗ ರೈತರು, ಬಡವರು ನೆಮ್ಮದಿಯಿಂದ ಇದ್ರು" ಎಂದು ತಿಳಿಸಿದರು.
ಕುಮಾರಸ್ವಾಮಿ ಮೇಲೆ ಹರಿಹಾಯ್ದ ಜಮೀರ್: "ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಹಿಂದುಳಿದ ವರ್ಗಗಳ ಇಲಾಖೆಯ ನಿಧಿಗೆ ಅನುದಾನ ಕಡಿತಗೊಳಿಸಿದ್ರು. 3,100 ಕೋಟಿ ರೂ. ಗಳಷ್ಟಿದ್ದ ಅನುದಾನವನ್ನು ಇವಾಗ 600 ಕೋಟಿ ರೂ.ಗಳಿಗೆ ತಂದು ನಿಲ್ಲಿಸಿದ್ದಾರೆ. ಅನುದಾನ ಕಡಿತದ ಬಗ್ಗೆ ಕುಮಾರಸ್ವಾಮಿ ಬಿಜೆಪಿಗೆ ಕಲಿಸಿಕೊಟ್ರು. ಹೀಗಾಗಿ, ಇಂದು 600 ಕೋಟಿ ರೂ. ಗೆ ಬಂದು ನಿಂತಿದೆ" ಎಂದು ಜೆಡಿಎಸ್ ಮತ್ತು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.
ಇದನ್ನೂ ಓದಿ:ಚುನಾವಣೆ ಫಲಿತಾಂಶದಿಂದ ಪ್ರಜಾಪ್ರಭುತ್ವದ ಮೇಲಿನ ನಂಬಿಕೆ ಮತ್ತಷ್ಟು ದೃಢ: ಮೋದಿಯಿಂದ ಮತದಾರರಿಗೆ ಅಭಿನಂದನೆ
ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಶಾಸಕ ಸತೀಶ್ ಜಾರಕಿಹೊಳಿ, "ನಿಮ್ಮಿಂದ ಪಡೆದ ಹಣವನ್ನು ಬಿಜೆಪಿ ನಿಮಗೆ ಮರಳಿಸುತ್ತಿದೆ. ರಸಗೊಬ್ಬರಗಳ ಬೆಲೆ 600 ಇದ್ದಿದ್ದು ಈಗ 1,800 ರೂ. ಆಗಿದೆ. ರೈತರಿಂದ ಲೂಟಿ ಹೊಡೆದ ಹಣವನ್ನು ವರ್ಷಕ್ಕೆ ಇಂತಿಷ್ಟು ಅಂತ ಕೇಂದ್ರ ನೀಡುತ್ತಿದೆ. ಬಿಜೆಪಿ ಜನರನ್ನು ಮರುಳು ಮಾಡ್ತಿದೆ" ಎಂದು ಕೇಂದ್ರ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಆಜಾನ್ ವೇಳೆ ಭಾಷಣ ನಿಲ್ಲಿಸಿದ ಕೈ ಮುಖಂಡ: ಹುಕ್ಕೇರಿಯ ಪ್ರಜಾಧ್ವನಿ ಯಾತ್ರೆ ಸಮಾರಂಭದಲ್ಲಿ ಕಾಂಗ್ರೆಸ್ ಮುಖಂಡ ಎಂ.ಬಿ.ಪಾಟೀಲ್ ಮಾತನಾಡುವಾಗ ಆಜಾನ್ ಕೇಳಿಬಂದಿದ್ದು ಅವರು ಭಾಷಣ ಮೊಟಕುಗೊಳಿಸಿದರು. ಆಜಾನ್ ಮುಗಿದ ನಂತರ ತಮ್ಮ ಭಾಷಣ ಮುಂದುವರೆಸಿದರು.