ಬೆಳಗಾವಿ : ಮೇಕೆದಾಟು ಪಾದಯಾತ್ರೆ ಕಾಂಗ್ರೆಸ್ ಪಕ್ಷದ ಮಹತ್ವದ ಹೋರಾಟ. ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಈಗಾಗಲೇ ನಮ್ಮ ನಾಯಕರು ಪಾದಯಾತ್ರೆ ನಡೆಸುವುದಾಗಿ ತಿಳಿಸಿದ್ದಾರೆ. ನಾನು ಕೂಡ ಇದರಲ್ಲಿ ಭಾಗಿಯಾಗಲಿದ್ದೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಮೇಕೆದಾಟು ಪಾದಯಾತ್ರೆಯಿಂದ ಹಿಂದೆ ಸರಿಯೋ ಮಾತೇ ಇಲ್ಲ- ಸತೀಶ್ ಜಾರಕಿಹೊಳಿ ಗೋಕಾಕ್ನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಲಕ್ಷಾಂತರ ಜನರನ್ನು ಸೇರಿಸಿ ಜಾತ್ರೆ, ಕುಂಭಮೇಳ, ದೊಡ್ಡ ದೊಡ್ಡ ಕಾರ್ಯಕ್ರಮ, ರಾಜಕೀಯ ಸಮಾವೇಶ ಮಾಡುತ್ತಿದೆ. ಸರ್ಕಾರ ಇದೆ ಎಂದ ಮಾತ್ರಕ್ಕೆ ತಮಗೆ ಬೇಕಾದ ರೀತಿಯಲ್ಲಿ ಕಾನೂನು ಬಳಸಿಕೊಳ್ಳುವುದಾ..? ಎಂದು ಪ್ರಶ್ನಿಸಿದರು. ಸರ್ಕಾರ ಈ ರೀತಿ ನಡೆದುಕೊಳ್ಳಬಾರದು, ಎಲ್ಲರಿಗೂ ಸಮಾನ ಕಾನೂನು ಇರಬೇಕು ಎಂದರು.
ಶನಿವಾರ, ಭಾನುವಾರ ವೀಕೆಂಡ್ ಕರ್ಫ್ಯೂ ಘೋಷಣೆ ಮಾಡಿದ್ದಾರೆ. ಭಾನುವಾರವೇ ನಮ್ಮ ಪಾದಯಾತ್ರೆ ಆರಂಭವಾಗುತ್ತಿದೆ. ಪ್ರತಿಭಟನೆ, ಸಾರ್ವಜನಿಕವಾಗಿ ಬಹಳ ಜನ ಸೇರಬಾರದು ಎಂದು ಸರ್ಕಾರ ಆದೇಶ ಮಾಡಿದೆ. ಈ ನಿಯಮಗಳನ್ನು ನಾವು ಪಾಲನೆ ಮಾಡಬೇಕಾಗುತ್ತದೆ. ಆದರೆ ಪಾದಯಾತ್ರೆಯನ್ನು ಮಾತ್ರ ನಿಲ್ಲಿಸುವುದಿಲ್ಲ. ಕಾಂಗ್ರೆಸ್ ಪಕ್ಷ ಮೇಕೆದಾಟು ಯೋಜನೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ ಎಂಬ ಭಯ ಬಿಜೆಪಿಗೆ ಕಾಡುತ್ತಿದೆ. ಆದ್ದರಿಂದಲೇ ಸರ್ಕಾರ ಈ ರೀತಿಯಾಗಿ ಅಡ್ಡಿ ಮಾಡುತ್ತಿದೆ. ಆದರೆ, ಯಾವುದೇ ಕಾರಣಕ್ಕೂ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯಿಂದ ಹಿಂದೆ ಸರಿಯೋ ಮಾತೇ ಇಲ್ಲವೆಂದು ಸತೀಶ್ ಜಾರಕಿಹೊಳಿಸಿ ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಯಾಕೆ ಯೋಜನೆಯನ್ನು ಕಾರ್ಯಗತಗೊಳಿಸಲಿಲ್ಲ ಎಂಬ ಸಚಿವ ಗೋವಿಂದ ಕಾರಜೋಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಸರ್ಕಾರದ ಅವಧಿಯಲ್ಲಿ ಮಾಡಲು ಆಗಲಿಲ್ಲ. ನಾವು ಮಾಡಲಿಲ್ಲ ಅಂದ ಮಾತ್ರಕ್ಕೆ ನೀವು ಮಾಡುವುದಿಲ್ಲವೇ ? ನಿಮಗೆ ನಾವು ಸಹ ಅವಕಾಶ ಕೊಡುತ್ತಿದ್ದೇವೆ. ನೀವು ಮಾಡಿದ್ರೆ ನಿಮಗೆ ಕ್ರೆಡಿಟ್ ಬರಲಿದೆ ಎಂದು ಹೇಳಿದರು.