ಬೆಳಗಾವಿ: "ಕಳೆದ 2008ರಿಂದ ಗೋಕಾಕ್ ಮತಕ್ಷೇತ್ರದಿಂದ ರಮೇಶ್ ಜಾರಕಿಹೊಳಿ ವಿರುದ್ಧ ರಾಜಕೀಯ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿದಿದ್ದೇನೆ. ಆದರೆ ಚುನಾವಣೆ ಬಂತು ಎಂದರೆ ನನ್ನ ಮೇಲೆ ವ್ಯವಸ್ಥಿತ ಅಪಪ್ರಚಾರ ಪ್ರಾರಂಭವಾಗುತ್ತದೆ. ಆ ಅಪಪ್ರಚಾರ ಹೋಗಲಾಡಿಸಲು ಹಾಗೂ ಗೋಕಾಕ್ ಕ್ಷೇತ್ರದ ಜನರ ನಂಬಿಕೆಗೋಸ್ಕರ ಕುಟುಂಬಸಮೇತವಾಗಿ ಬರುವ ಸೋಮವಾರ (ಮಾರ್ಚ್ 6) ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಆಣೆ ಪ್ರಮಾಣ ಮಾಡುತ್ತೇನೆ" ಎಂದು ಗೋಕಾಕ್ ಮತಕ್ಷೇತ್ರದ ಕಾಂಗ್ರೆಸ್ ಮುಖಂಡ ಅಶೋಕ್ ಪೂಜಾರಿ ತಿಳಿಸಿದರು.
ಬೆಳಗಾವಿ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ಎದುರಾಳಿ ಕಡೆಯಿಂದ ಹಣ ತೆಗೆದುಕೊಂಡು ಚುನಾವಣೆಯಲ್ಲಿ ಅವರ ಗೆಲುವಿಗೆ ಸಹಕಾರ ನೀಡುತ್ತೇನೆ. ಅಶೋಕ್ ಪೂಜಾರಿ ಹಣ ಪಡೆಯುತ್ತಾನೆ ಎಂಬೆಲ್ಲ ಆರೋಪಗಳನ್ನು ನನ್ನ ವಿರುದ್ಧ ಮಾಡುತ್ತಿದ್ದಾರೆ. ಆದರೆ ನಾನು ಯಾವುದೇ ಹಣ ಪಡೆದಿಲ್ಲ" ಎಂದರು.
"ಗೋಕಾಕ್ ಮತಕ್ಷೇತ್ರ ಎಂದರೆ ರಿಪಬ್ಲಿಕ್ ಆಫ್ ಗೋಕಾಕ್ ಎಂಬ ರೀತಿಯ ವಾತಾವರಣ ನಿರ್ಮಾಣವಾಗಿದೆ. ದಬ್ಬಾಳಿಕೆಯ ವಾತಾವರಣದಲ್ಲಿ ನಾನು ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಕಳೆದ ನಾಲ್ವತ್ತು ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ನಮ್ಮ ತಂದೆ ಕಡೆಯಿಂದ ಎಷ್ಟು ಆಗುತ್ತದೋ ಅಷ್ಟು ಸಹಾಯ ಮಾಡಿಕೊಂಡು ಸಮಾಜಸೇವೆ ಮಾಡಿತ್ತಾ ಬಂದಿದ್ದೇನೆ" ಎಂದು ಹೇಳಿದರು.