ಬೆಳಗಾವಿ:ಕಾಂಗ್ರೆಸ್-ಜೆಡಿಎಸ್‌ನ ಅತೃಪ್ತ ಶಾಸಕರು ಶೀಘ್ರವೇ ರಾಜೀನಾಮೆ ನೀಡಲಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೊಸ ಬಾಂಬ್ ಸಿಡಿಸಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಷ್ಟೇ ಅಲ್ಲದೇ ಜೆಡಿಎಸ್‌ನ ಅತೃಪ್ತರೂ ರಾಜೀನಾಮೆ ನೀಡಲಿದ್ದಾರೆ. ಆದರೆ ಎಷ್ಟು ಜನ ರಾಜೀನಾಮೆ ನೀಡಲಿದ್ದಾರೆ ಎಂಬುವುದನ್ನು ಈಗ ನಾನು ಬಹಿರಂಗ ಪಡಿಸುವುದಿಲ್ಲ. ಈ ಮೊದಲು ಅತೃಪ್ತರಿಗೆ ರಾಜೀನಾಮೆ ಅಂಗೀಕಾರ ಆಗುತ್ತೋ? ಇಲ್ಲವೋ? ಎಂಬ ಬಗ್ಗೆ ಭಯ ಇತ್ತು. ಉಮೇಶ ಜಾಧವ್ ರಾಜೀನಾಮೆ ಅಂಗೀಕಾರವಾಗಿದೆ. ಹೀಗಾಗಿ ಶೀಘ್ರವೇ ಉಳಿದ ಅತೃಪ್ತರೆಲ್ಲರೂ ರಾಜೀನಾಮೆ ನೀಡಲಿದ್ದಾರೆ. ಈ ಸರ್ಕಾರದ ಬಗ್ಗೆ ಕಾಂಗ್ರೆಸ್-ಜೆಡಿಎಸ್ ಕೆಲ ಶಾಸಕರಿಗೆ ಅತೃಪ್ತಿ ಇದೆ. ಹೀಗಾಗಿ ಸಮ್ಮಿಶ್ರ ಸರ್ಕಾರ ತಾನಾಗಿಯೇ ಪತನವಾಗಲಿದೆ ಎಂದು ಭವಿಷ್ಯ ನುಡಿದರು.
ಲೋಕಸಭೆ ಚುನಾವಣೆ ಬಳಿಕ ಬಿಜೆಪಿಯಿಂದ ಮತ್ತೆ ಆಪರೇಷನ್ ಕಮಲ ನಡೆಯಲಿದೆ ಎಂಬ ಸಚಿವ ಸತೀಶ ಜಾರಕಿಹೊಳಿ ಅವರಿಗೆ ತಿರುಗೇಟು ನೀಡಿದ ಈಶ್ವರಪ್ಪ, ನಾವು ಆಪರೇಷನ್ ಕಮಲವನ್ನೇ ಆರಂಭಿಸಿಲ್ಲ. ವಿರೋಧಿಗಳೇ ಈ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಮೈತ್ರಿ ಪಕ್ಷಗಳ ಶಾಸಕರಿಗೆ ಈ ಸರ್ಕಾರದ ಬಗ್ಗೆ ಅಸಮಾಧಾನವಿದೆ. ಹೀಗಾಗಿ ಸಮ್ಮಿಶ್ರ ಸರ್ಕಾರ ತಾನಾಗಿಯೇ ಪತನವಾಗಲಿದೆ. ಆಗ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂದರು.
ದೇವೇಗೌಡ, ಸಿದ್ದರಾಮಯ್ಯ ಹಾಗೂ ಶಿವರಾಮೇಗೌಡರು ಬಿಜೆಪಿಯನ್ನು ಕೋಮುವಾದಿ ಎಂದು ಟೀಕಿಸುತ್ತಾರೆ. ಆದರೆ ಮಂಡ್ಯದಲ್ಲಿ ಮೈತ್ರಿ ಪಕ್ಷದವರೇ ಗೌಡ-ನಾಯ್ಡು ಎಂದು ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಇಂಥವರಿಗೆ ಮತದಾರರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯಗೆ ಜಾತಿ ಬಿಟ್ರೆ ಬೇರೆ ಗೊತ್ತಿಲ್ಲ. ಸಿದ್ದರಾಮಯ್ಯ ಎಷ್ಟು ಜನ ಕುರುಬರಿಗೆ ಅನುಕೂಲ ಮಾಡಿದ್ದಾರೆ? ವಿಶ್ವನಾಥ, ಜಿ.ಶಂಕರಗೆ ಸಿದ್ದರಾಮಯ್ಯ ಮೋಸ ಮಾಡಿದ್ದಾರೆ. ಸೋಲುವ ಕ್ಷೇತ್ರದಲ್ಲಿ ಕುರುಬರಿಗೆ ಸಿದ್ದು ಟಿಕೆಟ್ ನೀಡಿದ್ದಾರೆ.