ಬೆಳಗಾವಿ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ವೇಳೆ ಪಿಎಫ್ಐ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ವಾಪಸ್ ಪಡೆದುಕೊಂಡಿದ್ದರು. ರಾಜ್ಯದಲ್ಲಿ ಪಿಎಫ್ಐ ಸಂಘಟನೆ ಇಷ್ಟರ ಮಟ್ಟಿಗೆ ಬೆಳೆಯಲು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ನವರು ಕಾರಣ ಎಂದು ಬಿಜೆಪಿ ಶಾಸಕ ಅಭಯ್ ಪಾಟೀಲ್ ಆರೋಪಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಪಿಎಫ್ಐ ವಿರುದ್ಧ ದಾಖಲಾಗಿದ್ದ ಕೇಸ್ ವಾಪಸ್ ಪಡೆದರು. ಇದರಿಂದ ಪಿಎಫ್ಐ ಸಂಘಟನೆಗೆ ಬಲ ಬಂತು. ದೇಶವಿರೋಧಿ ಕೆಲಸ ಮಾಡಿದ್ರೂ ಕಾಂಗ್ರೆಸ್ ಸರ್ಕಾರ ನಮ್ಮ ಹಿಂದಿದೆ ಎಂದು ಬಲಿಷ್ಠವಾಗಲು ಪಿಎಫ್ಐ ಪ್ರಯತ್ನ ಮಾಡಿತು.
ಇಂದು ಸಿಕ್ಕಂತ ದಾಖಲೆ ನೋಡಿದ್ರೆ ಇನ್ನೆರಡು ವರ್ಷದಲ್ಲಿ ದೇಶದಲ್ಲಿ ಅಲ್ಲೋಲ ಕಲ್ಲೋಲ ಪರಿಸ್ಥಿತಿ ನಿರ್ಮಾಣ ಮಾಡಬಹುದಾದಂತಹ ಶಕ್ತಿ ಬೆಳೆಸಿಕೊಂಡಿದ್ದಾರೆ. ಇದಕ್ಕೆ ಪಿಎಫ್ಐಗಿಂತ ಹೆಚ್ಚು ಕಾಂಗ್ರೆಸ್‌ನವರು ಕಾರಣರಾಗಿದ್ದಾರೆ ಎಂದರು.
ಪಿಎಫ್ಐ ದೇಶವಿರೋಧಿ, ಸಮಾಜದಲ್ಲಿ ಅಶಾಂತಿ ನಿರ್ಮಾಣ ಮಾಡುವ ಸಂಘಟನೆ ಎಂದು ಪದಾಧಿಕಾರಿಗಳ ಮೇಲೆ ಕೇಸ್ ಹಾಕಲಾಗಿತ್ತು. ಅವರೆಲ್ಲ ದೇಶಭಕ್ತರು ಅಂತಾ ಹೇಳಿ ಇದೇ ಸಿದ್ದರಾಮಯ್ಯ, ಕಾಂಗ್ರೆಸ್‌ನವರು ಕೇಸ್ ವಾಪಸ್ ಪಡೆದ್ರು. ನನಗೆ ಇರುವ ಮಾಹಿತಿ ಪ್ರಕಾರ 2 ಸಾವಿರಕ್ಕೂ ಹೆಚ್ಚು ಕೇಸ್ ವಾಪಸ್ ಪಡೆದ್ರು. ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ. ಈ ಕಾರ್ಯಾಚರಣೆಗಳನ್ನು ಮಾಡಿ ಅದನ್ನು ಮಟ್ಟ ಹಾಕುವ ಕೆಲಸ ಮಾಡಿದ್ದಾರೆ. ಇದರಿಂದ ನಿಶ್ಚಿತವಾಗಿ ದೇಶಕ್ಕೆ, ಸಮಾಜಕ್ಕೆ ಒಳ್ಳೆಯದಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ:2006ರಿಂದ ಇಲ್ಲಿಯವರೆಗೆ ನಡೆದ ಎಲ್ಲ ಹಗರಣಗಳ ನ್ಯಾಯಾಂಗ ತನಿಖೆ ನಡೆಸಿ: ಸಿದ್ದರಾಮಯ್ಯ ಆಗ್ರಹ