ಬೆಳಗಾವಿ: ಕಾಂಗ್ರೆಸ್ ಅಹಿಂದ ವರ್ಗಗಳ ಪರವಾಗಿರುವ ಪಕ್ಷ. ಹೀಗಾಗಿ ರಾಜ್ಯದಲ್ಲಿ ಅಹಿಂದ ಮರು ಹೋರಾಟದ ಅಗತ್ಯವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಎಲ್ಲ ಸಮುದಾಯಗಳನ್ನು ಒಳಗೊಂಡಿರುವ ಪಕ್ಷವಾಗಿದೆ. ಹೀಗಾಗಿ ಅಹಿಂದ ಹೋರಾಟವನ್ನು ಮತ್ತೆ ಸಂಘಟಿಸುವ ಅವಶ್ಯಕತೆ ಇಲ್ಲ. ಈ ಹಿಂದೆ ಅಹಿಂದಾ ಹೋರಾಟ ನಡೆದಾಗ ನಾವು ಕಾಂಗ್ರೆಸಿನಲ್ಲಿ ಇರಲಿಲ್ಲ. ಇದೀಗ ಕಾಂಗ್ರೆಸ್ನಲ್ಲಿದ್ದೇವೆ. ಅಹಿಂದವೇ ಕಾಂಗ್ರೆಸ್ ಪಕ್ಷದ ಬೇಸ್. ಹೀಗಾಗಿ ಮುಂದೆ ಸಿದ್ದರಾಮಯ್ಯ ಅಥವಾ ಇನ್ನಿತರ ನಾಯಕರ ನೇತೃತ್ವದಲ್ಲಿ ಅಹಿಂದ ಮರು ಹೋರಾಟದ ಯೋಜನೆ ಇಲ್ಲ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ರಾಜ್ಯದಲ್ಲಿ ನಡೆಯುತ್ತಿರುವ ವಿವಿಧ ಸಮುದಾಯಗಳ ಮೀಸಲಾತಿ ಹೋರಾಟದಲ್ಲಿ ರಾಜಕೀಯವೂ ನಡೆಯುತ್ತಿದೆ ಹಾಗೂ ಷಡ್ಯಂತ್ರವೂ ಇದೆ. ಅರ್ಹವಾಗಿ ಮೀಸಲಾತಿ ಸಿಗಬೇಕಾದ ಸಮುದಾಯಗಳಿಗೆ ತೊಂದರೆಯನ್ನು ನೀಡಲಾಗುತ್ತಿದೆ. ನ್ಯಾಯಬದ್ಧವಾಗಿ ಹೋರಾಟ ನಡೆಸುತ್ತಿರುವ ಸಮುದಾಯಕ್ಕೆ ಸರ್ಕಾರ ಮೀಸಲಾತಿ ನೀಡಬೇಕು. ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವ ಸಂಬಂಧ ಮುಖ್ಯಮಂತ್ರಿಗಳು ಈಗಾಗಲೇ ಸಮಯ ಕೇಳಿದ್ದಾರೆ. ಅವರ ನಿರ್ಣಯಕ್ಕಾಗಿ ಕಾಯುತ್ತೇವೆ. ಮುಂದೇನು ಮಾಡಬೇಕು ಎಂಬುದನ್ನು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಓದಿ: ಗೋಕಾಕಿಗೆ ಬರೋದಾದರೆ ಮೋಸ್ಟ್ ವೆಲ್ಕಮ್: ಹೆಬ್ಬಾಳ್ಕರ್ಗೆ ಸಚಿವ ಜಾರಕಿಹೊಳಿ ಪಂಥಾಹ್ವಾನ
ಬೆಳಗಾವಿ ಲೋಕಸಭೆ ಉಪಚುನಾವಣೆಯ ಅಭ್ಯರ್ಥಿಯ ಆಯ್ಕೆಯ ಕುರಿತು ಈಗಾಗಲೇ ಸ್ಥಳೀಯ ಮಟ್ಟದ ನಾಯಕರು ಹಾಗೂ ರಾಜ್ಯಮಟ್ಟದ ನಾಯಕರು ಸಭೆಗಳನ್ನು ನಡೆಸಿ ಚರ್ಚಿಸಿದ್ದೇವೆ. ಅಂತಿಮವಾಗಿ ಕೆಲವು ಹೆಸರುಗಳನ್ನು ಹೈಕಮಾಂಡ್ಗೆ ಕಳುಹಿಸಲಾಗಿದೆ. ಅಂತಿಮವಾಗಿ ಹೈಕಮಾಂಡ್ ಅಭ್ಯರ್ಥಿಯನ್ನು ಘೋಷಿಸಲಿದೆ ಎಂದು ತಿಳಿಸಿದರು.