ಬೆಂಗಳೂರು: ಬಿಜೆಪಿ ಜೊತೆಗಿನ ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ನಾವು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ 20ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ ಇದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ನಾವು ಕಾಂಗ್ರೆಸ್ ಶೇ.45ರಷ್ಟು ಮತ ಪ್ರಮಾಣ ಗಳಿಸಿದ್ದೆವು. ಅದನ್ನು ಲೋಕಸಭೆ ಚುನಾವಣೆಯಲ್ಲೂ ಉಳಿಸುವ ಸಾಧ್ಯತೆ ಇದೆ. ಅದರಿಂದ ನಮಗೇನು ತೊಂದರೆ ಆಗಲ್ಲ. ಅವರು ಮೈತ್ರಿ ಮಾಡಿಕೊಳ್ಳಲಿ. ನಾವು 2019ರಲ್ಲಿ ಅವರ ಜೊತೆ ಮೈತ್ರಿ ಕೊಂಡಿದ್ದೆವು. ಆಗ ಐದು ಸ್ಥಾನವನ್ನು ಜೆಡಿಎಸ್ಗೆ ಬಿಟ್ಟು ಕೊಟ್ಟಿದ್ದೆವು. ಆದರೆ ಅಂತಿಮವಾಗಿ ಫಲಿತಾಂಶ ಏನು ಬಂದಿದೆ ಎಂದು ಗೊತ್ತಿದೆ ಎಂದರು.
ಆ ಸಂದರ್ಭ ಮೈತ್ರಿ ಮಾಡಿಕೊಂಡಿದ್ದನ್ನು ಕಾಂಗ್ರೆಸ್ ಕಾರ್ಯಕರ್ತರು ಒಪ್ಪಿರಲಿಲ್ಲ. ಹೈ ಕಮಾಂಡ್ ತೀರ್ಮಾನ ಅಂತ ನಾವೆಲ್ಲ ಒಪ್ಪಿಕೊಂಡೆವು. ಈಗ ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಿದೆ. ಅದರಿಂದ ನಮಗೇನು ಸಮಸ್ಯೆ ಆಗಲ್ಲ. ನೀವು ಜಾತ್ಯಾತೀತ ಜನತಾದಳ ಅಂತ ಹಾಕಿದ್ದೀರ. ಈಗ ಯಾವ ಜಾತ್ಯಾತೀತ ಅಂತ ಜನ ಕೇಳ್ತಾರೆ. ಉತ್ತರವನ್ನು ಅವರು ಕೊಡ್ತಾರೆ ಅಂತ ಅಂದುಕೊಳ್ಳುತ್ತೇನೆ ಎಂದು ಟೀಕಿಸಿದರು.
ಶಾಂತಿ ಕಾಪಾಡಬೇಕು :ಕಾವೇರಿ ನೀರಿನ ವಿವಾದ ಹಿನ್ನೆಲೆಮಂಡ್ಯ ಬಂದ್ ವಿಚಾರವಾಗಿ ಮಾತನಾಡಿದ ಅವರು, ಶಾಂತಿ ಕಾಪಾಡಲು ಎಲ್ಲ ತಯಾರಿ ಮಾಡಿದ್ದೇವೆ. ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಪ್ರತಿಭಟನಾಕಾರರು ಸಾರ್ವಜನಿಕ ಆಸ್ತಿಗೆ ಹಾನಿ ಬಾರದಂತೆ, ಶಾಂತಿ ಸೌಹಾರ್ದತೆ ಕಾಪಾಡಬೇಕು. ಕಾನೂನು ಕೈಗೆತ್ತಿಕೊಳ್ಳಬಾರದು. ಕಾನೂನು ಬಾಹಿರ ಚಟುವಟಿಕೆ ಮಾಡಬಾರದು ಎಂದು ಮನವಿ ಮಾಡಿದರು.