ಚಿಕ್ಕೋಡಿ (ಬೆಳಗಾವಿ): ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡುದಾರರಿಗೆ ಪ್ರತಿ ಯೂನಿಟ್ಗೆ 170 ರೂಪಾಯಿ ಸರ್ಕಾರ ವರ್ಗಾವಣೆ ಮಾಡುತ್ತದೆ ಎಂದು ಘೋಷಣೆ ಮಾಡಲಾಗಿದೆ. ಆದರೆ, ಈ ತಿಂಗಳು ಯಾರಿಗೂ ಹಣ ಸಿಗೋದಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಅವರು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದಲ್ಲಿ ಬೆಳಗಾವಿ ಜಿಲ್ಲಾಡಳಿತ ವತಿಯಿಂದ ವನ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ರಾಜ್ಯದಲ್ಲಿ ಈಗಾಗಲೇ ಗ್ಯಾರಂಟಿ ಯೋಜನೆಗಳು ಹಂತ ಹಂತವಾಗಿ ಜಾರಿಯಾಗುತ್ತಿವೆ. ಜನ ಅದರಿಂದ ಖುಷಿ ಪಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ 10 ಕೆಜಿ ಅಕ್ಕಿ ನೀಡಲಾಗುವುದು ಎಂದು ರಾಜ್ಯದ ಜನರಿಗೆ ನಾವು ಭರವಸೆ ನೀಡಿದ್ದೇವೆ. ಆದರೆ, ಕೇಂದ್ರ ಸರ್ಕಾರ ನಮಗೆ ಅಕ್ಕಿ ನೀಡದ ಹಿನ್ನೆಲೆಯಲ್ಲಿ, ನಾವು ಕರುನಾಡ ಜನರಿಗೆ ಅಕ್ಕಿ ಬದಲು ಹಣ ನೀಡಿಲು ಮುಂದಾಗಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.
ಕೇಂದ್ರ ಸರ್ಕಾರದ ಧೋರಣೆಯಿಂದ ನಾವು ಸದ್ಯ ಈಗ 5 ಕೆಜಿ ಅಕ್ಕಿಯನ್ನು ನೀಡುತ್ತೇವೆ. ಇನ್ನೂ ಐದು ಕೆಜಿ ಅಕ್ಕಿ ಬದಲು ಜನರ ಖಾತೆಗೆ ಹಣ ನೀಡಲಾಗುವುದು ಎಂದು ಮುಖ್ಯಮಂತ್ರಿ ಅವರು ಈಗಾಗಲೇ ತಿಳಿಸಿದ್ದಾರೆ. ಆದರೆ, ಈ ತಿಂಗಳು ಪಡಿತರ ಚೀಟಿದಾರರಿಗೆ ಹಣ ದೊರೆಯುವುದಿಲ್ಲ. ಈ ತಿಂಗಳ ಹಣ ಮುಂದಿನ ತಿಂಗಳು ಸಿಗುತ್ತದೆ. ಈ ತಿಂಗಳಿನಿಂದಲೇ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಈ ತಿಂಗಳ ಹಣ ಮುಂದಿನ ತಿಂಗಳು ನೀಡಲಾಗುವುದು. ತಿಂಗಳಿನ ಲೆಕ್ಕ ಇರುತ್ತದೆ, ಜುಲೈ ತಿಂಗಳ ಹಣ ಆಗಸ್ಟ್ ತಿಂಗಳಿನಲ್ಲಿ ಸಿಗಲಿದೆ. ಮೊದಲ ತಾರೀಖಿನಂದೇ ಸಿಗಲ್ಲ. 10 ರಿಂದ 20 ತಾರೀಕಿನವರೆಗೆ ರೇಷನ್ ನೀಡುತ್ತಾರೆ. ಬಿಪಿಎಲ್ ಕುಟುಂಬಗಳಿಗೆ ಈ ಹಣ ದೊರೆಯಲಿದೆ ಎಂದು ಸಚಿವ ಜಾರಕಿಹೊಳಿ ಹೇಳಿದರು.