ಬೆಳಗಾವಿ: ಜುಲೈ 14ರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಶುರು ಮಾಡುವ ಬಗ್ಗೆ ಮಾತನಾಡಿಕೊಂಡಿದ್ದೇವೆ. ಜು.3 ಅಥವಾ 4ನೇ ತಾರೀಖು ಈ ಬಗ್ಗೆ ಘೋಷಣೆ ಮಾಡುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ವೈಎಸ್‌ಟಿ ಸಂಗ್ರಹ ಎಂಬ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿ, ಕುಮಾರಸ್ವಾಮಿ ಅವರು ಕೂಡ ಸರ್ಕಾರ ನಡೆಸಿದಂತ ಅನುಭವ ಇದ್ದವರು. ಕುಮಾರಸ್ವಾಮಿ ಅಣ್ಣ, ಹಿರಿಯರು, ರಾಜಕೀಯ ಮುತ್ಸದ್ಧಿಗಳು ಅವರು ಯಾವ ಅರ್ಥದಲ್ಲಿ ಮಾತನಾಡಿದ್ದಾರೆ ಗೊತ್ತಿಲ್ಲ ಎಂದರು.
ಸರ್ಕಾರ ರಚನೆ ಆಗಿ ಈಗ ಒಂದು ತಿಂಗಳು, ಐದು ದಿನ ಆಗಿದೆ. ಸರ್ಕಾರಕ್ಕೆ ಕೆಲಸ ಮಾಡಲು ಬಿಡಿ. ಜನರು ಬಹಳಷ್ಟು ಆಶಾಭಾವನೆ ಇಟ್ಟುಕೊಂಡು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ಈಗಾಗಲೇ ನೀವು ಈ ರೀತಿ ಮಾತನಾಡಲು ಶುರು ಮಾಡಿದರೆ ಅದು ತಪ್ಪಾಗುತ್ತೆ. ಸ್ವಲ್ಪ ಟೈಮ್ ಕೊಡಿ, ಯಾವ ಅರ್ಥದಲ್ಲಿ ಮಾತನಾಡಿದ್ದಾರೆ ಅವರನ್ನೇ ಕೇಳಿ ಎಂದು ಹೇಳಿದರು.
ವಿಪಕ್ಷದವರು ಹತಾಶರಾಗಿದ್ದಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಹತಾಶರಾಗಿದ್ದಾರೆ ಅಂತಾ ಹೇಳಲು ಬಯಸಲ್ಲ. ಬಹಳ ನಿರೀಕ್ಷೆ ಇಟ್ಟುಕೊಂಡು ರಾಜ್ಯದ ಜನತೆ ನಮಗೆ ಆಶೀರ್ವಾದ ಮಾಡಿದ್ದಾರೆ. ಕೆಲಸ ಮಾಡಲು ನಮಗೆ ಸಮಯಾವಕಾಶ ನೀಡಿ ಅಂತಾ ಕೇಳುತ್ತಿದ್ದೇನೆ. ನಮಗೆ ಕೇಂದ್ರ ಸರ್ಕಾರ ಅಕ್ಕಿ ಕೊಡಲಿಲ್ಲ. ಆದರೂ ನಾವು ದುಡ್ಡು ಕೊಟ್ಟು ನಮ್ಮ ಭಾಷೆ ಉಳಿಸಿಕೊಳ್ಳುತ್ತಿದ್ದೇವೆ. ಈ ತಿಂಗಳಿಂದ ಗೃಹಜ್ಯೋತಿ, ಅನ್ನಭಾಗ್ಯ ಲಾಭ ಎಲ್ಲರಿಗೂ ಸಿಗುತ್ತೆ ಎಂದರು.