ಬೆಳಗಾವಿ: ಲೋಕಸಭೆ ಕ್ಷೇತ್ರದಲ್ಲಿ ಎಂಇಎಸ್‍ನ 101 ಅಭ್ಯರ್ಥಿಗಳ ಸ್ಪರ್ಧೆಯ ನಿರ್ಧಾರದ ಹಿಂದೆ ಕಾಂಗ್ರೆಸ್ ಕುತಂತ್ರ ಇತ್ತು ಎಂದು ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಆರೋಪಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ತಂತ್ರ ವಿಫಲವಾಗಿದೆ. ಆರು ಜನ ಪಕ್ಷೇತರರು ನಾಮಪತ್ರ ಹಿಂಪಡೆದು ನನಗೆ ಬೆಂಬಲ ಸೂಚಿಸಿದ್ದಾರೆ. ಅಲ್ಲದೇ ಆರೂ ಜನ ಪಕ್ಷೇತರ ಅಭ್ಯರ್ಥಿಗಳು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. 64ಕ್ಕೂ ಅಧಿಕ ಅಭ್ಯರ್ಥಿಗಳಿದ್ದರೆ ಬ್ಯಾಲೇಟ್ ಪೇಪರ್ನಲ್ಲಿ ಚುನಾವಣೆ ನಡೆಸಬೇಕಿತ್ತು.
ಚುನಾವಣೆ ಸುಗಮವಾಗಿ ನಡೆಯಬಾರದು ಎಂಬುವುದು ಕಾಂಗ್ರೆಸ್‍ನ ಕುತಂತ್ರವಾಗಿತ್ತು. ಈ ಹಿಂದೆ ಇದೇ ರೀತಿ ಅನುಸರಿಸಿದ್ದ ಕಾಂಗ್ರೆಸ್‍ಗೆ ಮುಖಭಂಗವಾಗಿತ್ತು. ಈಗಲೂ ಕಾಂಗ್ರೆಸ್‍ಗೆ ಹಿನ್ನಡೆಯಾಗಿದೆ. ನೇರವಾಗಿ ಬಿಜೆಪಿ ಎದುರಿಸಲು ಸಾಧ್ಯವಾಗದೇ ಈ ರೀತಿ ಕುತಂತ್ರಗಳಿಗೆ ಕಾಂಗ್ರೆಸ್ ನಾಯಕರು ಕೈಹಾಕಿದ್ದರು ಎಂದು ಕುಟುಕಿದರು.
ಪಕ್ಷೇತರರಾಗಿ ಕಣಕ್ಕಿಳಿದಿದ್ದ ಅಶೋಕ ಹುನಜಿ, ಮೋಹನ್ ಮೋರೆ, ಅಶೋಕ ಚೌಗುಲೆ, ಗುರುಪುತ್ರ ಕುಲ್ಲಾರ, ಸಂಗಮೇಶ ಚಿಕ್ಕನರಗುಂದ, ಸಂಜೀವ್ ಗಣಾಚಾರಿ ಈ ಎಲ್ಲರೂ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡರು. ಮಹಾನಗರ ಬಿಜೆಪಿ ಅಧ್ಯಕ್ಷ ರಾಜೇಂದ್ರ ಹರಕುಣಿ, ಬಿಜೆಪಿ ವಕ್ತಾರ ಎಂ.ಬಿ.ಝಿರಲಿ ಹಾಗೂ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಈ ಎಲ್ಲರಿಗೆ ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು.