ಬೆಳಗಾವಿ :ರಾಜ್ಯದಲ್ಲಿ ಹಿಂದೆಂದೂ ಕಾಣದ ಮಾದರಿಯ ಘಟನೆಗಳು ಇತ್ತೀಚೆಗೆ ಹೆಚ್ಚಿದ್ದು, ರಾಜ್ಯ- ಮಹಾರಾಷ್ಟ್ರ ಗಡಿ ಭಾಗದ ಕನ್ನಡಿಗರು ಹಾಗೂ ಮರಾಠಿಗರಲ್ಲಿ ಆತಂಕ ಮೂಡಿಸುವ ಕಾರ್ಯ ಆಗಿರುವುದು ಬೇಸರದ ಸಂಗತಿ ಎಂದು ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಅಭಿಪ್ರಾಯ ಪಟ್ಟರು.
ವಿಧಾನ ಪರಿಷತ್ನಲ್ಲಿ ಭೋಜನ ವಿರಾಮದ ಬಳಿಕ ನಿಯಮ 68ರ ಅಡಿ ಕರ್ನಾಟಕ-ಮಹಾರಾಷ್ಟ್ರ ವಿವಾದವನ್ನು ಶಾಶ್ವತವಾಗಿ ಪರಿಹರಿಸುವಲ್ಲಿ ಸರ್ಕಾರ ವಿಫಲವಾಗಿರುವ ಕುರಿತು ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಬಿ.ಕೆ. ಹರಿಪ್ರಸಾದ್ ಮಾತನಾಡಿದರು. ಯಾವುದೋ ಒಂದು ಗುಪ್ತ ಕಾರ್ಯಸೂಚಿ ಇರಿಸಿಕೊಂಡು ಈ ಗಲಾಟೆ ನಡೆಯುತ್ತಿದ್ದು, ಮಹಾರಾಷ್ಟ್ರ ಅನಗತ್ಯವಾಗಿ ಪ್ರತಿ ಸಾರಿ ಕ್ಯಾತೆ ತೆಗೆಯುತ್ತಿದೆ. ಗಡಿ ಭಾಗದಲ್ಲಿ ಪುಂಡಾಟಿಕೆ ಹೆಚ್ಚಾಗಿದ್ದು ಇದನ್ನು ಕನ್ನಡಿಗರು, ಮರಾಠಿಗರು ಮಾಡುತ್ತಿದ್ದಾರೆ ಎನ್ನುತ್ತಿಲ್ಲ. ಪಟ್ಟಭದ್ರ ಹಿತಾಸಕ್ತಿಗಳು ಈ ಕಾರ್ಯ ಮಾಡುತ್ತಿದ್ದು, ಇದಕ್ಕೆ ಸೂಕ್ತ ಪರಿಹಾರ ಹುಡುಕಿಕೊಳ್ಳದಿದ್ದರೆ ಸಮಸ್ಯೆ ಇನ್ನಷ್ಟು ಹೆಚ್ಚಲಿದೆ ಎಂದು ಎಚ್ಚರಿಸಿದರು.
ನಾವು ಮಹಾಜನ್ ವರದಿಯಂತೆ ನಡೆದುಕೊಂಡಿದ್ದೇವೆ. ಆದರೆ ಮಹಾರಾಷ್ಟ್ರದ ಎಂಇಎಸ್ ಸಂಘಟನೆಗಳು ಗಡಿ ಭಾಗದ ಕನ್ನಡಿಗರಿಗೆ ಹಾಗೂ ಮರಾಠಿಗರಿಗೆ ಭಯ ಮೂಡಿಸುವ ರೀತಿ ಅಧಿವೇಶನ ಆರಂಭಕ್ಕೆ 15 ದಿನ ಮುನ್ನ ಹೋರಾಟ ಆರಂಭಿಸುತ್ತಾರೆ. ಇನ್ನು ಮಹಾರಾಷ್ಟ್ರ ಸರ್ಕಾರದ ಕೆಲ ಸಚಿವರು ರಾಜ್ಯದವರು ಕೈಲಾಗದವರು ಅನ್ನುವ ಭಾವನೆ ಮೂಡುವ ರೀತಿ ಮಾತನಾಡುತ್ತಾರೆ. ಎಸ್.ಎಂ.ಕೃಷ್ಣ ಈ ಗಡಿ ವಿವಾದ ಬಗೆಹರಿಸಲು ಪ್ರಯತ್ನ ಮಾಡಿದ್ದರು.
ನಂತರ ಒಂದು ಆಯೋಗ ಸಹ ರಚನೆಯಾಗಿ ಇದೀಗ ಸುಪ್ರೀಂ ಕೋರ್ಟ್ನಲ್ಲಿ ಈ ವಿಚಾರದ ವಿಚಾರಣೆ ನಡೆಯುತ್ತಿರುವ ಹಿನ್ನೆಲೆ ನಾವು ಹೆಚ್ಚು ಮಾತನಾಡಲು ಆಗಲ್ಲ. ರಾಜ್ಯದ ಬಸ್ಗೆ ಅವರು ಮಸಿ ಬಳಿಯುತ್ತಾರೆ. ಮಹಾರಾಷ್ಟ್ರದಿಂದ ಬರುವ ಅಲ್ಲಿನ ಲಾರಿಗಳು ಮಾರ್ಗದಲ್ಲೇ ನಿಂತಿವೆ. ಆದರೆ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಸರ್ಕಾರ ಸರ್ವಪಕ್ಷ ಸದಸ್ಯರ ಕರೆಸಿ ಚರ್ಚಿಸುವ ಕಾರ್ಯ ಮಾಡಬೇಕಿತ್ತು ಎಂದು ಹೇಳಿದರು.
ಕೇಂದ್ರಕ್ಕೆ ನಿಯೋಗ ತೆರಳುವ ಕಾರ್ಯ ಮಾಡಬೇಕಿತ್ತು. ಕೇವಲ ಮಹಾರಾಷ್ಟ್ರ, ಕರ್ನಾಟಕ ಸಿಎಂಗಳು ತೆರಳಿ ಕೇಂದ್ರ ಗೃಹ ಸಚಿವರನ್ನು ಭೇಟಿಯಾಗಿ ಬಂದರೆ ಸಮಸ್ಯೆ ಪರಿಹಾರವಾಗಲ್ಲ. ನಾವು ಸಹ ರಾಜ್ಯದವರು, ನಮಗೂ ಮಾತನಾಡಲು ಅವಕಾಶ ಕೊಡಬೇಕು. ಗಡಿ ಭಾಗದ ಕೆಲ ಭಾಗಗಳು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕೆಂದು ಮಹಾರಾಷ್ಟ್ರ ಜತೆ ಕೈಜೋಡಿಸಿ ಮಾತನಾಡುತ್ತಿದ್ದಾರೆ. ಪಾಂಡಿಚೆರಿ ಕೇಂದ್ರಾಡಳಿತ ಪ್ರದೇಶವಾಗಿ ಯಾವ ರೀತಿಯ ಸಮಸ್ಯೆ ಎದುರಿಸುತ್ತಿದೆ ಎನ್ನುವುದು ಅರ್ಥವಾಗುತ್ತದೆ. ಇಂತಹ ರಾಷ್ಟ್ರದಲ್ಲಿ ಸಂಕುಚಿತ ಭಾವನೆ ಇಟ್ಟು ಕೇಂದ್ರಾಡಳಿತ ಪ್ರದೇಶ ಆಗಬೇಕೆಂಬ ಮಾತು ಕೇಳಿಬಂದರೆ ನಾವು ಕೈಕಟ್ಟಿ ಕೂರಲ್ಲ ಎಂದು ಎಚ್ಚರಿಸಿದರು.
ಮುಂಬಯಿಯನ್ನು ಕೇಂದ್ರಾಡಳಿತ ಪ್ರದೇಶವನ್ನು ಮಾಡಿ ಎಂದು ನಾವು ಒತ್ತಾಯಿಸುತ್ತೇವೆ. ಅವರು ನಮ್ಮ ರಾಜ್ಯದ ಕೆಲ ಭಾಗವನ್ನು ಕೇಂದ್ರಾಡಳಿತ ಪ್ರದೇಶ ಮಾಡಲು ಹೊರಟಿದ್ದಾರೆ. ಮುಂಬಯಿಯಿಂದ ಸಾಕಷ್ಟು ಕನ್ನಡಿಗರನ್ನು ರಾಜ್ಯಕ್ಕೆ ವಾಪಸ್ ಕಳಿಸಲಾಯಿತು. ನಾವು ಯಾರನ್ನೂ ಅಲ್ಲಿಗೆ ಕಳಿಸಿಲ್ಲ. ಜವಾಬ್ದಾರಿ ಇರುವ ಮೇಲ್ಮನೆ ಸದಸ್ಯರು ಎಲ್ಲಾ ಸೇರಿ ಒಂದು ರೆಸಲ್ಯೂಷನ್ ತರಬೇಕು. ರಾಜ್ಯದ ಯಾವುದೇ ಭಾಗವನ್ನು ಬೇರೆಯವರು ತೆಗೆದುಕೊಳ್ಳಲು ಸಾಧ್ಯವಿಲ್ಲ. ಇಲ್ಲಿನ ಎಲ್ಲಾ ಭಾಗ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಸಂಕಲ್ಪ ತೊಟ್ಟು ನಮಗೆ ಶಾಂತಿಯಿಂದ ಈ ಸಮಸ್ಯೆ ಬಗೆಹರಿಯಬೇಕು ಎಂದು ಹೇಳಿದರು.