ಬೆಳಗಾವಿ: ರಾಜ್ಯ ವಿಧಾನಸಭಾ ಚುನಾವಣೆಗೆ ಜಿಲ್ಲೆಯಲ್ಲಿ ನಾಮಪತ್ರ ಸಲ್ಲಿಕೆ ಭರಾಟೆ ಮುಗಿದಿದ್ದು, ಈಗ ಚುನಾವಣಾ ಪ್ರಚಾರಕ್ಕೆ ರಾಜಕೀಯ ಪಕ್ಷಗಳು ರಣತಂತ್ರ ಶುರು ಮಾಡಿವೆ. ಅದರಲ್ಲೂ ಮರಾಠಿಗರ ಮತಗಳನ್ನು ಸೆಳೆಯುವ ಉದ್ದೇಶದಿಂದ ಕಾಂಗ್ರೆಸ್ ಮತ್ತು ಬಿಜೆಪಿ ಮಹಾರಾಷ್ಟ್ರದ ನಾಯಕರನ್ನು ಸ್ಟಾರ್ ಕ್ಯಾಂಪೇನರ್ ಆಗಿ ಕರೆಸಿಕೊಳ್ಳುತ್ತಿವೆ.
ಬೆಳಗಾವಿ ಉತ್ತರ, ದಕ್ಷಿಣ, ಗ್ರಾಮೀಣ, ಖಾನಾಪುರ, ನಿಪ್ಪಾಣಿ ಹಾಗೂ ಯಮಕನಮರಡಿ ಮತಕ್ಷೇತ್ರಗಳಲ್ಲಿ ಮರಾಠಿಗರ ಮತಗಳು ಹೆಚ್ಚಿವೆ. ಇದರ ಹಿನ್ನೆಲೆ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಮರಾಠಿಗರ ಮತಗಳನ್ನು ತಮ್ಮತ್ತ ಸೆಳೆಯಲು ನಾನಾ ರೀತಿಯ ಕಸರತ್ತು ನಡೆಸುತ್ತಿವೆ. ಅದರ ಭಾಗವಾಗಿ ಕಾಂಗ್ರೆಸ್ ಸ್ಟಾರ್ ಪ್ರಚಾರಕರಾಗಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಗಳಾದ ಅಶೋಕ್ ಚವ್ಹಾಣ್, ಪೃಥ್ವಿರಾಜ್ ಚವ್ಹಾಣ್ ಅವರನ್ನು ನೇಮಿಸಲಾಗಿದೆ. ಇತ್ತ, ಬಿಜೆಪಿಯಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಸ್ಟಾರ್ ಪ್ರಚಾರಕರನ್ನಾಗಿ ಮಾಡಲಾಗಿದೆ.
ಮರಾಠಿ ಭಾಷಿಕರು ಹೆಚ್ಚಿರುವ ಜಿಲ್ಲೆಯ ಗಡಿ ಕ್ಷೇತ್ರಗಳಲ್ಲಿ ಈ ಮಹಾರಾಷ್ಟ್ರ ನಾಯಕರು ಪ್ರಚಾರ ಮಾಡಿ ಮರಾಠಿಗರ ಮತಗಳು ತಮ್ಮ ಪಕ್ಷಗಳಿಗೆ ಯತ್ನ ಮಾಡಲಿದ್ದಾರೆ ಎಂಬುವುದು ಆಯಾ ಪಕ್ಷಗಳು ಲೆಕ್ಕಾಚಾರ. ಇದೇ ವೇಳೆ ಮಹಾರಾಷ್ಟ್ರದ ಎನ್ಸಿಪಿ ಮತ್ತು ಶಿವಸೇನೆ ಪಕ್ಷಗಳ ನಾಯಕರು ಬಹುತೇಕ ಎಂಇಎಸ್ ಅಭ್ಯರ್ಥಿಗಳಿಗೆ ಬೆಂಬಲಿಸುವ ಸಾಧ್ಯತೆ ಹೆಚ್ಚಿದೆ.
ಎಂಇಎಸ್ ಅಭ್ಯರ್ಥಿಗಳ ಪ್ರಭಾವ:2013ರಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಎಂಇಎಸ್ನ ಸಂಭಾಜಿ ಪಾಟೀಲ, ಖಾನಾಪುರ ಕ್ಷೇತ್ರದಿಂದ ಅರವಿಂದ ಪಾಟೀಲ್ ಗೆಲ್ಲುವ ಮೂಲಕ ಮತ್ತೆ ಎಂಇಎಸ್ ತನ್ನ ಜೀವಂತಿಕೆ ಸಾಬೀತು ಮಾಡಿತ್ತು. ಆದರೆ, ಕಳೆದ ಬಾರಿ 2018ರ ಚುನಾವಣೆಯಲ್ಲಿ ಎಂಇಎಸ್ ಹೀನಾಯವಾಗಿ ಸೋಲು ಅನುಭವಿಸಿತ್ತು. ಮಹಾನಗರ ಪಾಲಿಕೆ ಚುನಾವಣೆಯಲ್ಲೂ ಎಂಇಎಸ್ ಧೂಳಿಪಟವಾಗಿದೆ.
ಈಗ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಎಂಇಎಸ್ ಹೇಗಾದರೂ ಮಾಡಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕೆಂದು ಪಣ ತೊಟ್ಟಿದೆ. ಹೀಗಾಗಿ ನಾಮಪತ್ರ ಸಲ್ಲಿಕೆ ವೇಳೆ ಶಕ್ತಿ ಪ್ರದರ್ಶನ ಮಾಡಿರುವ ಎಂಇಎಸ್ ಅಭ್ಯರ್ಥಿಗಳು ಎರಡೂ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಎರಡನೇ ಬಾರಿ ಗೆಲುವಿನ ವಿಶ್ವಾಸದಲ್ಲಿರುವ ಕಾಂಗ್ರೆಸ್ನ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿಯೂ ಮರಾಠಿ ಅಭ್ಯರ್ಥಿ ನಾಗೇಶ ಮನ್ನೋಳ್ಕರ್ ಕಣಕ್ಕಿಳಿಸಿದೆ. ಎಂಇಎಸ್ನಿಂದ ಆರ್.ಎಂ. ಚೌಗುಲೆ ಸ್ಪರ್ಧಿಸಿದ್ದು, ನಾಮಪತ್ರ ಸಲ್ಲಿಕೆ ವೇಳೆ ಸಾವಿರಾರು ಜನರನ್ನು ಸೇರಿಸಿ ಬೃಹತ್ ಜಾಥಾ ನಡೆಸಿದ್ದಾರೆ. ಇದರಿಂದ ಗ್ರಾಮೀಣ ಕ್ಷೇತ್ರದಲ್ಲಿ ಮರಾಠಿಗರ ಚಿತ್ತ ಯಾರತ್ತ ಎಂಬುದು ಸದ್ಯ ತೀವ್ರ ಕುತೂಹಲ ಮೂಡಿಸಿದೆ.