ಅಥಣಿ: ಪ್ರವಾಹ ಸಂಭವಿಸಿ ನೆರೆಯಿಂದ ಹಲವು ಕುಟುಂಬಗಳು ಬೀದಿಗೆ ಬಿದ್ದಿವೆ. ಈ ಕುಟುಂಬಗಳಿಗೆ ಪರಿಹಾರ ನೀಡುವಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಅಥಣಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಡಿಸಿಎಂ ಲಕ್ಷ್ಮಣ್ ಸವದಿ ಹಾಗೂ ಸ್ಥಳಿಯ ಶಾಸಕ ಮಹೇಶ್ ಕುಮಟಳ್ಳಿ ವಿರುದ್ಧ ಘೋಷಣೆ ಕೂಗಿ ನೆರೆ ಸಂತ್ರಸ್ತರಿಗೆ ಅದರಲ್ಲೂ ತೀರ್ಥ ಗ್ರಾಮದ ಯುವಕ ಬಸವರಾಜ ಕಾಂಬಳೆ ಕುಟುಂಬಕ್ಕೆ ಪರಿಹಾರ ವಿತರಿಸುವಲ್ಲಿ ವಿಳಂಬವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರವಾಹದ ಸೆಳೆತಕ್ಕೆ ಸಿಲುಕಿ ಮೃತಪಟ್ಟ ಬಾಲಕನ ಕುಟುಂಬಕ್ಕೆ ದೇಣಿಗೆ ನೀಡಲು ನೂರಾರು ಕಾರ್ಯಕರ್ತರು ಅಥಣಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಿಕ್ಷಾಯಾತ್ರೆ ಎಂಬ ಜಾಥಾ ನಡೆಸಿ ಪಟ್ಟಣದ ವ್ಯಾಪಾರಸ್ಥರಿಂದ ಹಣ ಸಂಗ್ರಹಿಸಿದ್ರು.
ನಂತರ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಮಾತನಾಡಿ, ನೆರೆ ಸಂತ್ರಸ್ತರ ವಿಚಾರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ತಾಲೂಕಿನಲ್ಲಿ ಇದುವರೆಗೆ ಯಾವುದೇ ಗ್ರಾಮಗಳಿಗೆ ಪರಿಹಾರ ಬಂದಿಲ್ಲ. ಅದರಲ್ಲೂ ವಿಶೇಷವಾಗಿ ನೆರೆಯಲ್ಲಿ ಮೃತನಾದ ಬಾಲಕನ ಕುಟುಂಬಕ್ಕೆ ಸರ್ಕಾರ ಘೋಷಿಸಿದಂತೆ ಐದು ಲಕ್ಷ ರೂಪಾಯಿ ಪರಿಹಾರ ನೀಡಲು ವಿಳಂಬ ನೀತಿ ತೋರುತ್ತಿದ್ದಾರೆ. ಇನ್ನಾದರೂ ಎಚ್ಚೆತ್ತುಕೊಂಡು ಸರ್ಕಾರ ಅವರಿಗೆ ಪರಿಹಾರ ನೀಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಂದು ಎಚ್ಚರಿಕೆ ನೀಡಿದರು.