ಹುಬ್ಬಳ್ಳಿ :ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷನನ್ನು ಹತ್ಯೆ ಮಾಡಿರುವುದನ್ನ ಖಂಡಿಸಿ ಹುಬ್ಬಳ್ಳಿಯಲ್ಲಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಜರಂಗದಳ ಕಾರ್ಯಕರ್ತರು ಹರ್ಷನ ಕೊಲೆಗೆ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರವಿದ್ದಾಗ ಹಲವಾರು ಹಿಂದೂಗಳ ಕಗ್ಗೊಲೆಯಾಗಿದೆ.
ಆದರೆ, ಹಿಂದುತ್ವದ ಹೆಸರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಅಧಿಕಾರದಲ್ಲಿದ್ದರೂ ಕೊಲೆಯಾಗಿರುವುದು ವಿಷಾದನೀಯ ಸಂಗತಿ. ಯುವಕನ ಕಗ್ಗೊಲೆಯನ್ನು ಖಂಡಿಸಿ ಇವತ್ತು ಸಾಂಕೇತಿಕವಾಗಿ ಪ್ರತಿಭಟನೆ ಮಾಡ್ತಿದ್ದೇವೆ.
ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡ್ತೇವೆ. ತಕ್ಷಣ ಇದರ ಹಿಂದಿರುವ ಸಂಘಟನೆಗಳನ್ನು ನಿಷೇಧಿಸಬೇಕು. ಕೊಲೆಗಡುಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಹುಬ್ಬಳ್ಳಿ, ಬೆಳಗಾವಿಯಲ್ಲಿ ಪ್ರತಿಭಟನೆ ಬೆಳಗಾವಿಯಲ್ಲಿ ವಿಹೆಚ್ಪಿ, ಬಜರಂಗದಳದಿಂದ ಪ್ರತಿಭಟನೆ : ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬೆಳಗಾವಿ ಚೆನ್ನಮ್ಮ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ರ್ಯಾಲಿ ಡಿಸಿ ಕಚೇರಿವರೆಗೆ ಹೋಯಿತು.
ಇದನ್ನೂ ಓದಿ:ಹರ್ಷ ಹತ್ಯೆ ಪ್ರಕರಣದಲ್ಲಿ 8 ಮಂದಿ ಬಂಧನ: ಡಿಜಿಪಿಗೆ ಪತ್ರ ಬರೆದ ಆರಗ ಜ್ಞಾನೇಂದ್ರ
ತೆರೆದ ವಾಹನದಲ್ಲಿ ಹರ್ಷ ಭಾವಚಿತ್ರದ ಬೃಹತ್ ಫ್ಲೆಕ್ಸ್ ಅಳವಡಿಸಲಾಗಿದೆ. ಜೈಶ್ರೀರಾಮ, ಜೈ ಶಿವಾಜಿ, ಜೈ ಭವಾನಿ.. ಹರ ಹರ ಮಹಾದೇವ ಎಂಬ ಘೋಷಣೆಗಳು ಮೊಳಗಿದವು. ಅಮರ್ ರಹೇ.. ಅಮರ್ ರಹೇ ಹರ್ಷ ಅಮರ್ ರಹೇ, ಭಾರತ್ ಮಾತಾ ಕೀ ಜೈ' ಎಂದು ಕಾರ್ಯಕರ್ತರ ಘೋಷಣೆ ಕೂಗಿದರು.
ಪ್ರತಿಭಟನೆ ಹಿನ್ನೆಲೆ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದ್ದು, ಡಿಸಿಪಿ ರವೀಂದ್ರ ಗಡಾದಿ ಭದ್ರತೆಯ ನೇತೃತ್ವ ವಹಿಸಿದ್ದಾರೆ. ಡಿಸಿ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಗೃಹಸಚಿವ ಆರಗ ಜ್ಞಾನೇಂದ್ರ ಅವರಿಗೆ ಮನವಿ ಸಲ್ಲಿಸಿ, ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.