ಬೆಳಗಾವಿ: ಕಾಗವಾಡ ತಾಲೂಕಿನ ಬಸವೇಶ್ವರ (ಕೆಂಪವಾಡ) ಏತ ನೀರಾವರಿ ಯೋಜನೆಯನ್ನು 2024ರ ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನ ನೀಡಿದರು. ಬೆಳಗಾವಿಯ ಸುವರ್ಣ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಕಾಗವಾಡ ತಾಲೂಕಿನ ಬಸವೇಶ್ವರ ಏತ ನೀರಾವರಿ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿ ಸೂಚನೆ ನೀಡಿದರು.
2017ರಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿತ್ತು. ಪ್ರಸ್ತುತ ಶೇ. 85 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, 1067 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. 2024ರ ಫೆಬ್ರವರಿಯೊಳಗೆ ಎರಡು ಪಂಪ್‌ಗಳನ್ನು ಹಾಗೂ ಇನ್ನೂ ಮೂರು ಪಂಪ್‌ಗಳನ್ನು ಜೂನ್, 2024ರ ವೇಳೆಗೆ ಅಳವಡಿಸಿ ಸೆಪ್ಟೆಂಬರ್ ಅಂತ್ಯದ ವೇಳೆಗೆ ಇಡೀ ಯೋಜನೆ ಪೂರ್ಣಗೊಳಿಸಲು ಸಿಎಂ ಸೂಚಿಸಿದರು.
ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಕಾಗವಾಡ ಶಾಸಕ ಭರಮಗೌಡ (ರಾಜು) ಕಾಗೆ, ಜಲ ಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಮುಖ್ಯಮಂತ್ರಿ ಅವರ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಮುಖ್ಯಮಂತ್ರಿಯವರ ಕಾರ್ಯದರ್ಶಿ ಡಾ. ಕೆ.ವಿ. ತ್ರಿಲೋಕಚಂದ್ರ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ:ಬೆಳಗಾವಿ ಮಹಿಳೆ ಮೇಲೆ ಹಲ್ಲೆ ಪ್ರಕರಣ: ಪ್ರೇಮಿಗಳಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡುತ್ತೆ.. ಡಾ ಜಿ ಪರಮೇಶ್ವರ್ ಅಭಯ
ಏತ ನೀರಾವರಿ ಯೋಜನೆಗಳ ದುರಸ್ತಿ ಕಾರ್ಯ ಶೀಘ್ರ ಪೂರ್ಣ -ಡಿಸಿಎಂ:ಮತ್ತೊಂದೆಡೆ, ರೇಣುಕಾ ಏತ ನೀರಾವರಿ, ಎಡಗಟ್ಟಿ ಏತ ನೀರಾವರಿ, ಸಿಂಗಾರೋಪ್ ಏತ ನೀರಾವರಿ ಯೋಜನೆಗಳ ಹಳೆಯ ರಿವರ್ ಸೈಪನ್ ಬದಲಾಗಿ ಹೊಸ ತಂತ್ರಜ್ಞಾನದ ಮೂಲಕ ನೀರಾವರಿ ಸೌಲಭ್ಯವನ್ನು ಮತ್ತೆ ಒದಗಿಸಲಾಗುವುದು ಎಂದು ಡಿಸಿಎಂ ಡಿ ಕೆ ಶಿವಕುಮಾರ್ ವಿಧಾನಸಭೆಯಲ್ಲಿ ತಿಳಿಸಿದರು.
ಇಂದು ವಿಧಾಸಭೆಯ ಪ್ರಶ್ನೋತ್ತರ ಕಲಾಪದ ವೇಳೆ ಸವದತ್ತಿ ಯಲ್ಲಮ್ಮ ಕ್ಷೇತ್ರದ ಶಾಸಕ ವಿಶ್ವಾಸ್ ವಸಂತ್ ವೈದ್ಯ ಅವರ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಹೊಸ ತಂತ್ರಜ್ಞಾನದ ಮೂಲಕ ಮತ್ತೆ ನೀರಾವರಿ ಸೌಲಭ್ಯ ಕಲ್ಪಿಸಲು ವಿವರವಾದ ಅಂದಾಜು ಪಟ್ಟಿ ತಯಾರಿಸುವ ಜವಾಬ್ದಾರಿಯನ್ನು ಸರ್ವೆ ಸಂಸ್ಥೆಗೆ ನೀಡಲಾಗಿದ್ದು, ಕೆಲಸ ಪ್ರಗತಿಯಲ್ಲಿದೆ. ರೇಣುಕಾ ಏತ ನೀರಾವರಿ, ಎಡಗಟ್ಟಿ ಏತ ನೀರಾವರಿ, ಸಿಂಗಾರೋಪ್ ಏತ ನೀರಾವರಿ ಯೋಜನೆಗಳ ರಿವರ್ ಸೈಪನ್ ಹಾಗೂ ಇತರ ದುರಸ್ತಿ ಕಾರ್ಯಗಳಿಗೆ ತಾಂತ್ರಿಕ ಶಕ್ಯತೆ ಮತ್ತು ಅನುದಾನದ ಲಭ್ಯತೆ ಅನುಸಾರ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಪ್ರತ್ಯೇಕ ಸಭೆ ನಡೆಸಲಾಗಿದೆ. ಪೈಪ್ ಹಾಗೂ ಹಲವು ದುರಸ್ತಿ ಕಾರ್ಯಗಳಿಗೆ ಯಾವುದೇ ರೀತಿಯ ಆರ್ಥಿಕ ತೊಂದರೆ ಎದುರಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.