ಬೆಂಗಳೂರು: ಡ್ರಿಂಕ್ ಅಂಡ್ ಡ್ರೈವ್ ಪರಿಶೀಲನೆ ನೆಪದಲ್ಲಿ ಅಕ್ರಮ ಅಲ್ಕೋಮೀಟರ್ ಬಳಸಿ ವಾಹನ ಸವಾರರನ್ನು ಸುಲಿಗೆ ಮಾಡುತ್ತಿದ್ದ ಅಶೋಕ ನಗರ ಸಂಚಾರ ಠಾಣೆಯ ಇಬ್ಬರು ಪೇದೆಗಳ ಅಮಾನತಾದ ಬಗ್ಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪ್ರತಿಕ್ರಿಯಿಸಿದ್ದು, ಇಲಾಖೆಯಲ್ಲೆ ಈ ರೀತಿ ನಡೆದಿರುವುದು ಬೇಸರದ ಸಂಗತಿ ಎಂದಿದ್ದಾರೆ.
ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಇದನ್ನೂ ಓದಿ :ಕುಡುಕ ಸವಾರರನ್ನು ಹಿಡಿಯೋ ನೆಪದಲ್ಲಿ ಹಣ ವಸೂಲಿ: ಎಎಸ್ಐ ಸೇರಿ ನಾಲ್ವರು ಸಸ್ಪೆಂಡ್
ಅಶೋಕ ನಗರದ ಠಾಣೆಯ ಸಿಬ್ಬಂದಿ ಮುನಿಯಪ್ಪ, ಗಂಗರಾಜು, ನಾಗರಾಜು ಕೆಲ ಖಾಸಗಿ ವ್ಯಕ್ತಿಗಳೊಂದಿಗೆ ಸೇರಿ ಡ್ರಿಂಕ್ ಅಂಡ್ ಡ್ರೈವ್ ಪರಿಶೀಲನೆ ನೆಪದಲ್ಲಿ ಅಕ್ರಮ ಆಲ್ಕೋಹಾಲ್ ಮೀಟರ್ ಬಳಸಿ ವಾಹನ ಸವಾರರಿಂದ ಸುಲಿಗೆ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ, ಪೊಲೀಸ್ ಸಿಬ್ಬಂದಿಯನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದರು. ಅಕ್ರಮದಲ್ಲಿ ಪಾಲ್ಗೊಂಡ ಪೊಲೀಸ್ ಸಿಬ್ಬಂದಿ ವಿರುದ್ಧ ಈಗಾಗಲೇ ಇಲಾಖೆ ಕ್ರಮ ಜರುಗಿಸಿ, ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತ, ಇಲಾಖೆಯಲ್ಲಿ ಇದ್ದುಕೊಂಡು ಈ ರೀತಿ ಮಾಡಿದ್ದು ನಿಜಕ್ಕೂ ಬೇಸರದ ಸಂಗತಿ. ತಪ್ಪು ಮಾಡಿದವರ ಮೇಲೆ ಯಾವುದೇ ರೀತಿ ಕ್ಷಮೆ ಇಲ್ಲ. ಯಾರೇ ಇನ್ನು ಮುಂದೆ ಈ ರೀತಿಯ ಕೃತ್ಯಗಳಲ್ಲಿ ಪಾಲ್ಗೊಂಡರೆ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.