ಬೆಳಗಾವಿ:ಸಂಪುಟ ವಿಸ್ತರಣೆ ಸಂಬಂಧ ಹೈಕಮಾಂಡ್ ಜೊತೆ ಚರ್ಚಿಸಿ ಅಂತಿಮಗೊಳಿಸಲು ನಾಳೆ ದೆಹಲಿಗೆ ತೆರಳುತ್ತಿರುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಬೆಳಗ್ಗೆ ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಸಂಪುಟ ವಿಸ್ತರಣೆ ವಿಳಂಬವಾಗುತ್ತಿದೆ. ಹಾಗಾಗಿ ನಾನೇ ದೆಹಲಿಗೆ ಹೊರಟಿದ್ದೇನೆ. ಉಪಚುನಾವಣೆಯಲ್ಲಿ ಗೆದ್ದ ಎಲ್ಲರಿಗೂ ಸಚಿವ ಸ್ಥಾನ ನೀಡಲು ನಿರ್ಧರಿಸಿದ್ದೇನೆ. ಹೈಕಮಾಂಡ್ ನಾಯಕರು ಗೆದ್ದವರಲ್ಲಿ ಇಬ್ಬರನ್ನು ಸಚಿವರನ್ನಾಗಿ ಮಾಡುವುದು ಬೇಡ ಅಂದ್ರೆ ಇಬ್ಬರಿಗೆ ಮಿಸ್ ಆಗಲಿದೆ. ಹೈಕಮಾಂಡ್ ಅಪೇಕ್ಷೆ ಏನೆಂಬುದು ಶೀಘ್ರವೇ ತಿಳಿಯಲಿದೆ. ಬೆಳಗಾವಿಯಲ್ಲಿ ಈಗಾಗಲೇ ಇಬ್ಬರು ಸಚಿವರಿದ್ದಾರೆ. ಉಪಚುನಾವಣೆಯಲ್ಲಿ ಗೆದ್ದ ಮೂವರು ಹಾಗೂ ಉಮೇಶ್ ಕತ್ತಿ ಅವರಿಗೂ ಸಚಿವ ಸ್ಥಾನ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.