ಬೆಳಗಾವಿ :ಪ್ರಾಥಮಿಕ ಅಂದಾಜಿನ ಪ್ರಕಾರ, ಬೆಳಗಾವಿ ಸೇರಿದಂತೆ ರಾಜ್ಯದಲ್ಲಿ ಪ್ರವಾಹ ಹಾಗೂ ಧಾರಾಕಾರ ಮಳೆಯಿಂದ 10 ಸಾವಿರ ಕೋಟಿ ರೂಪಾಯಿ ಹಾನಿಯಾಗಿದೆ. ಆದ್ದರಿಂದ ತಕ್ಷಣವೇ 3 ಸಾವಿರ ಕೋಟಿ ರೂಪಾಯಿ ನೆರವು ನೀಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ನಷ್ಟದ ಅಂದಾಜು:
ಕೇಂದ್ರ ಗೃಹ ಸಚಿವ ಅಮಿತ್ ಶಾ ಜತೆಯಲ್ಲಿ ಪ್ರವಾಹ ಬಾಧಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ಹಾಗೂ ಹಿರಿಯ ಅಧಿಕಾರಿಗಳ ಸಭೆಯ ಬಳಿಕ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಹತ್ತು ಸಾವಿರ ಕೋಟಿ ಹಾನಿಯು ಪ್ರಾಥಮಿಕ ಅಂದಾಜು ಮಾತ್ರವಾಗಿದೆ. ಪ್ರವಾಹ ಸ್ಥಿತಿಯನ್ನು ನೋಡಿದರೆ ಅಂದಾಜು 30 ರಿಂದ 40 ಸಾವಿರ ಕೋಟಿ ರೂಪಾಯಿ ಹಾನಿಯಾಗಿದೆ ಎಂಬುದು ನನ್ನ ಅಭಿಪ್ರಾಯ. ಸಮಗ್ರ ಸಮೀಕ್ಷೆ ಬಳಿಕ ಇದು ಗೊತ್ತಾಗಲಿದೆ. ಜನ-ಜಾನುವಾರುಗಳ ರಕ್ಷಣೆ ಹಾಗೂ ಪುನರ್ವಸತಿ ಕಲ್ಪಿಸುವುದು ಮತ್ತು ಜನರಿಗೆ ಪರಿಹಾರ ತಲುಪಿಸುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ. ಇದರಲ್ಲಿ ಯಾವುದೇ ರಾಜಿಯಿಲ್ಲ ಎಂದರು.
ಬೆಳೆಹಾನಿಯಿಂದ ತತ್ತರಿಸಿರುವ ರೈತರು, ಮನೆಗಳನ್ನು ಕಳೆದುಕೊಂಡಿರುವ ಜನರು ಆತಂಕ ಪಡಬೇಕಿಲ್ಲ. ಸರ್ಕಾರ ಅವರ ಜತೆಗಿದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು. ರಾಷ್ಟ್ರೀಯ ವಿಪತ್ತು ಘೋಷಣೆ ಬಗ್ಗೆ ಕೇಂದ್ರ ಸರ್ಕಾರ ನಿರ್ಧರಿಸಲಿದೆ. ಪರಿಹಾರ ಒದಗಿಸುವುದು ರಾಜ್ಯ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುದ್ದಿಗೋಷ್ಠಿ ವೈಮಾನಿಕ ಸಮೀಕ್ಷೆ:
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಾಯುಸೇನೆಯ ಹೆಲಿಕಾಪ್ಟರ್ ನಲ್ಲಿ ಎರಡು ಗಂಟೆ ಹತ್ತು ನಿಮಿಷಗಳ ಕಾಲ ಪ್ರವಾಹ ಬಾಧಿತ ಕರ್ನಾಟಕ ಹಾಗೂ ಮಹಾರಾಷ್ಟ್ರದ ಕೆಲ ಜಿಲ್ಲೆಗಳ ವೈಮಾನಿಕ ಸಮೀಕ್ಷೆ ನಡೆಸಿದರು. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ವೈಮಾನಿಕ ಸಮೀಕ್ಷೆ ಆರಂಭಿಸಿದ ಅವರು, ವಿಜಯಪುರದ ಆಲಮಟ್ಟಿ ಜಲಾಶಯದಿಂದ ಮಹಾರಾಷ್ಟ್ರದ ಕೊಯ್ನಾ ಜಲಾಶಯ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಹರಿಯುವ ನದಿಗಳನ್ನು ವೀಕ್ಷಿಸಿದರು.
ನೆರವಿಗೆ ಮನವಿ:
ನೆರೆ ಸಂತ್ರಸ್ತರ ಪುನರ್ವಸತಿಗಾಗಿ ಸರ್ಕಾರಿ ನೌಕರರ ಸಂಘದಿಂದ 200 ಕೋಟಿ ರೂಪಾಯಿ ನೆರವು ನೀಡುವುದಾಗಿ ತಿಳಿಸಿದ್ದಾರೆ. ಅದೇ ರೀತಿ ರಾಜ್ಯದ ಕೈಗಾರಿಕೋದ್ಯಮಿಗಳು ನೆರವು ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿಕೊಂಡರು. 2005 ರಲ್ಲಿ ಇದೇ ರೀತಿ ಪರಿಸ್ಥಿತಿ ಎದುರಾದಾಗ ನೆರವಿನ ಮಹಾಪೂರ ಹರಿದುಬಂದಿತ್ತು. ಈಗಲೂ ಕೈಗಾರಿಕೋದ್ಯಮಿಗಳು ಕೈಜೋಡಿಸಿದರೆ ಸಂತ್ರಸ್ತರ ಪುನರ್ವಸತಿ ಸುಲಭವಾಗಲಿದೆ ಎಂದರು.
ನಾಳೆಯಿಂದ ಮತ್ತೆ ಪ್ರವಾಸ:
ಪ್ರವಾಹ ಬಾಧಿತ ಐದಾರು ಜಿಲ್ಲೆಗಳಲ್ಲಿ ನಾಳೆಯಿಂದ ಮತ್ತೇ ಪ್ರವಾಸ ಕೈಗೊಂಡು ಸಂತ್ರಸ್ತರ ಅಹವಾಲು ಆಲಿಸುತ್ತೇನೆ ಎಂದು ತಿಳಿಸಿದರು. ಸಮಗ್ರ ಸಮೀಕ್ಷೆಯ ವರದಿ ಬಂದ ಬಳಿಕ ಹೆಚ್ಚಿನ ಅನುದಾನ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು.
ಆಗಸ್ಟ್ 15 ರ ಬಳಿಕ ಸಂಪುಟ ವಿಸ್ತರಣೆ
ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿರುವುದರಿಂದ ಮೊದಲು ಪರಿಹಾರ ಹಾಗೂ ಸಂತ್ರಸ್ತರ ಪುನರ್ವಸತಿಗೆ ಆದ್ಯತೆ ನೀಡಬೇಕು. ಆಗಸ್ಟ್ 15 ರ ಬಳಿಕ ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಿರ್ಧರಿಸೋಣ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ. ಆ ಪ್ರಕಾರ ಆಗಸ್ಟ್ 15 ರವರೆಗೆ ರಾಜ್ಯದಲ್ಲಿ ಪ್ರವಾಸ ಕೈಗೊಂಡು ಆ.16 ರಂದು ನವದೆಹಲಿಗೆ ತೆರಳಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.