ಕರ್ನಾಟಕ

karnataka

ETV Bharat / state

ಖಾನಾಪುರದ 100 ಗ್ರಾಮಗಳ ಪ್ರತಿ ಮನೆಗೆ ಕುಡಿಯುವ ನೀರು ಯೋಜನೆ: ಸಿಎಂ ಬಸವರಾಜ್​ ಬೊಮ್ಮಾಯಿ - ಈಟಿವಿ ಭಾರತ ಕನ್ನಡ

ಖಾನಾಪುರದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹಿಂದುಳಿದ ವರ್ಗದವರಿಗೆ ಹಾಗೂ ಎಸ್ಸಿ ಎಸ್ಟಿ ವರ್ಗಕ್ಕೆ ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗುವುದು ಎಂದು ಜನಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಬೊಮ್ಮಾಯಿ ಹೇಳಿದರು.

KN_BGM
ಬಸವರಾಜ್​ ಬೊಮ್ಮಾಯಿ

By

Published : Nov 9, 2022, 9:48 PM IST

ಬೆಳಗಾವಿ: ಜಲಜೀವನ್ ಮಿಷನ್​ನ ಹರ್ ಘರ್ ಜಲ್ ಯೋಜನೆಯಡಿ ಖಾನಾಪುರದ 100 ಗ್ರಾಮಗಳ ಪ್ರತಿಯೊಂದು ಮನೆಗೆ ಕುಡಿಯುವ ನೀರಿನ ಪೂರೈಕೆಗಾಗಿ 434 ಕೋಟಿ ರೂ. ಮೊತ್ತದ ಯೋಜನೆ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಜಿಲ್ಲೆಯ ಖಾನಾಪುರದಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಜನ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೈನುಗಾರಿಕೆ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಖಾನಾಪುರ ತಾಲೂಕಿನಲ್ಲಿ ಹೈನುಗಾರಿಕೆ ಮಾಡುವ ಗೌಳಿ ಜನಾಂಗ ಸಾಕಷ್ಟಿದ್ದಾರೆ. ಮರಾಠ ಅಭಿವೃದ್ಧಿ ನಿಗಮಕ್ಕೆ ಹೆಚ್ಚುವರಿ ಅನುದಾನ ನೀಡಿ, ಗೌಳಿ ಜನಾಂಗಕ್ಕೆ ಶೆಡ್​ಗಳು, ದನಕರುಗಳು ಸೇರಿದಂತೆ, ಹೈನುಗಾರಿಕೆಗೆ ಬೇಕಾದ ವ್ಯವಸ್ಥೆಗಳನ್ನು ಪೂರೈಸಲು ತಿಳಿಸಲಾಗಿದ್ದು, ಈ ವಿಶೇಷ ಕಾರ್ಯಕ್ರಮಕ್ಕೆ ಆದೇಶ ಮಾಡುವ ಮೂಲಕ ಗೌಳಿ ಜನಾಂಗದವರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ ಎಂದರು.

ಖಾನಾಪುರದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯ ನಿರ್ಮಾಣ:ಖಾನಾಪುರದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹಿಂದುಳಿದ ವರ್ಗದವರಿಗೆ ಹಾಗೂ ಎಸ್ಸಿ ಎಸ್ಟಿ ವರ್ಗಕ್ಕೆ ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗುವುದು. ಈ ಭಾಗದಲ್ಲಿ ಮಳೆಯಿಂದ ಹಾನಿಯಾಗಿರುವ ರಸ್ತೆಗಳ ಅಭಿವೃದ್ಧಿಗೆ ಅನುದಾನವನ್ನು ಶೀಘ್ರದಲ್ಲಿ ಒದಗಿಸಲಾಗುವುದು.

ಮಹದಾಯಿ ನೀರಾವರಿ ಯೋಜನೆಯಡಿ ಚೆಕ್ ಡ್ಯಾಂ ನಿರ್ಮಾಣ ಹಾಗೂ ನೀರಾವರಿ ವ್ಯವಸ್ಥೆಗೆ ಖಾನಾಪುರವನ್ನು ಜೋಡಿಸಲಾಗುವುದು. ಜಾಂಬೋಟಿ ಜೇನಿನ ಅಭಿವೃದ್ಧಿಗೆ 5 ಕೋಟಿ ರೂ.ವನ್ನು ಬಜೆಟ್​ನಲ್ಲಿ ಮೀಸಲಿರಿಸಿದ್ದು, ಕೂಡಲೇ ಅನುದಾನ ಬಿಡುಗಡೆ ಮಾಡಲಾಗುವುದು. ಖಾನಾಪುರದಲ್ಲಿ ಕೈಗಾರಿಕಾ ಅಭಿವೃದ್ಧಿ ಮಾಡುವ ಮೂಲಕ ಯುವಕರಿಗೆ ಉದ್ಯೋಗ ಒದಗಿಸಲಾಗುವುದು ಎಂದರು.

ನಮ್ಮದು ಜನಸ್ಪಂದನೆಯ ಸರ್ಕಾರ:ಬಿಜೆಪಿ ಜನಸ್ಪಂದನೆಯ ಸರ್ಕಾರವಾಗಿದ್ದು, ರಾಜ್ಯದ ಎಲ್ಲ ವರ್ಗದ ಜನರು ಸ್ವಾಭಿಮಾನದ ಬದುಕು ನಡೆಸಲು ಅನುವು ಮಾಡಿಕೊಡಲಾಗುತ್ತಿದೆ.‌ ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದು, 10 ಲಕ್ಷ ರೈತ ಕುಟುಂಬಗಳಿಗೆ ಹಾಗೂ 6 ಲಕ್ಷ ಕೂಲಿ ಕಾರ್ಮಿಕರ ಮಕ್ಕಳಿಗೆ, ಕಾರ್ಮಿಕರ ಮಕ್ಕಳಿಗೂ ಯೋಜನೆ ಜಾರಿಗೆ ತರಲಾಗಿದೆ.

ನಮ್ಮದು ಜನಸ್ಪಂದನೆಯ ಸರ್ಕಾರ. ಸ್ತ್ರೀಸಾಮರ್ಥ್ಯ ಯೋಜನೆಯಡಿ ಖಾನಾಪುರದ 265 ಗ್ರಾಮಗಳ ಎರಡು ಸ್ತ್ರೀ ಸಂಘ‌ಗಳಿಗೆ 5ಲಕ್ಷ ರೂ.ಗಳ ಆರ್ಥಿಕ ಸಹಾಯ ನೀಡಿ, ಸ್ವಯಂ ಉದ್ಯೋಗ ಕಲ್ಪಿಸಲಾಗುತ್ತಿದೆ. ಯುವಕರಿಗಾಗಿ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯಡಿ ಪ್ರತಿ ಗ್ರಾಮದ 2 ಯುವಕ ಸಂಘಗಳಿಗೆ ಆರ್ಥಿಕ ಸಹಾಯ ನೀಡಿ, 5 ಲಕ್ಷ ಯುವಕರಿಗೆ ಸ್ವಯಂ ಉದ್ಯೋಗ ಕಲ್ಪಿಸಲಾಗುತ್ತಿದೆ. ಎಲ್ಲ ವರ್ಗದ ಜನರು ಸ್ವಾಭಿಮಾನದ ಬದುಕು ನಡೆಸಲು ಅನುವು ಮಾಡಿಕೊಡಲಾಗುತ್ತಿದೆ ಎಂದರು.

ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಸರ್ಕಾರದ ದಿಟ್ಡ ನಿರ್ಧಾರ :ವಿಶ್ವಕರ್ಮ, ಬಡಿಗ, ಕುಂಬಾರ ಸೇರಿದಂತೆ ಕುಲಕಸುಬುಗಳನ್ನು ಮಾಡುತ್ತಿರುವ ಕುಶಲಕರ್ಮಿಗಳಿಗೆ 50 ಸಾವಿರ ನೀಡುವ ಯೋಜನೆ ರೂಪಿಸಲಾಗಿದೆ. ಎಲ್ಲ ಕುರಿಗಾರರ ಸಂಘಗಳಿಗೆ 20 ಕುರಿ ಒಂದು ಮೇಕೆ ನೀಡಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ 354 ಕೋಟಿ ರೂ. ಗಳನ್ನು ಮೀಸಲಿರಿಸಲಾಗಿದೆ. ಸಾಮಾಜಿಕ ನ್ಯಾಯ ಕೇವಲ ಭಾಷಣ ಮಾಡದೇ ಕೃತಿಯಲ್ಲಿ ಮಾಡಿ ತೋರಿಸಬೇಕು. ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡುವ ದಿಟ್ಡ ನಿರ್ಧಾರವನ್ನು ನಮ್ಮ ಸರ್ಕಾರ ಕೈಗೊಂಡಿದ್ದು, ನವೆಂಬರ್ 1 ರಿಂದ ಜಾರಿ ಮಾಡಲಾಗಿದೆ ಎಂದರು.

ಇದನ್ನೂ ಓದಿ:ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಪಾಲಿಕೆ ಅವಕಾಶ.. ಕಾಂಗ್ರೆಸ್​, ಎಐಎಂಐಎಂ ಆಕ್ಷೇಪ

ABOUT THE AUTHOR

...view details