ಕರ್ನಾಟಕ

karnataka

ETV Bharat / state

ಆಗಸ್ಟ್ 11 ರಂದು ಅಥಣಿಗೆ ಸಿಎಂ ಸಿದ್ದರಾಮಯ್ಯ ಆಗಮನ: ಸ್ಥಳೀಯರಲ್ಲಿ ಗರಿಗೆದರಿದ ನಿರೀಕ್ಷೆಗಳು - ಅಥಣಿ ಭಾಗದ ಜನರ ನಿರೀಕ್ಷೆಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಸ್ಟ್ 11 ರಂದು ಅಥಣಿಗೆ ಭೇಟಿ ನೀಡಲಿದ್ದಾರೆ. ಸಿಎಂ ಆಗಮನದ ಈ ಹಿನ್ನೆಲೆ ಸ್ಥಳೀಯರ ನಿರೀಕ್ಷೆಗಳೇನು ಎಂಬ ಮಾಹಿತಿ ಇಲ್ಲಿದೆ ನೋಡಿ.

athini
ಅಥಣಿ

By

Published : Aug 9, 2023, 10:14 AM IST

Updated : Aug 9, 2023, 12:31 PM IST

ಅಥಣಿ ಜನರ ನಿರೀಕ್ಷೆಗಳು

ಚಿಕ್ಕೋಡಿ : ಆಗಸ್ಟ್ 11 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟದ ಆರು ಜನ ಸಚಿವರು ಅಥಣಿ ತಾಲೂಕಿನ ಕೋಕಟನೂರ ಗ್ರಾಮಕ್ಕೆ ಆಗಮಿಸುವ ಹಿನ್ನೆಲೆ ಈ ಭಾಗದ ಜನರಲ್ಲಿ ನಿರೀಕ್ಷೆಗಳು ಗರಿಗೆದರಿವೆ. ಬಹು ದಿನಗಳ ಕೆಲ ಬೇಡಿಕೆಗಳಿಗೆ ಈಗಲಾದರೂ ಸಿಎಂ ಮನ್ನಣೆ ನೀಡಬಹುದೆಂದು ಶಿವಯೋಗಿಗಳ ನಾಡಿನ ಜನರಲ್ಲಿ ಭರವಸೆ ಮೂಡಿದೆ.

ಹೌದು, ಆ.11 ರಂದು ಸಿಎಂ ಸಿದ್ದರಾಮಯ್ಯ ಹಾಗೂ ಆರು ಜನ ಸಚಿವರು ತಾಲೂಕಿನ ಕೋಕಟನೂರ ಗ್ರಾಮದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಆಗಮಿಸುತ್ತಿರುವ ಹಿನ್ನೆಲೆ, ಈ ಭಾಗದ ಜನರಲ್ಲಿ ಬಹುದಿನಗಳ ಬೇಡಿಕೆ ಮತ್ತೆ ಚಿಗುರೊಡೆದು ನಿಂತಿದೆ. ಈ ವರ್ಷ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಅಥಣಿ ಭಾಗದಲ್ಲಿ ಯಾವುದೇ ಕೃಷಿ ಚಟುವಟಿಕೆಗಳಿಲ್ಲದೇ ರೈತರು ಕಂಗಾಲಾಗಿದ್ದು, ತಾಲೂಕನ್ನು ಬರಗಾಲ ಪ್ರದೇಶ ಎಂದು ಘೋಷಿಸಬೇಕು ಎಂಬುದು ರೈತರ ಒತ್ತಾಯ.

2019 ರಲ್ಲಿ ಕೃಷ್ಣ ನದಿ ಪ್ರವಾಹದಿಂದ ಮನೆ ಕಳೆದುಕೊಂಡ ಸಾವಿರಾರು ಕುಟುಂಬಗಳಿಗೆ ಅಂದಿನ ಬಿಜೆಪಿ ಸರ್ಕಾರದ ಕಾಲಾವಧಿಯಲ್ಲಿದ್ದ ಅಧಿಕಾರಿಗಳ ಎಡವಟ್ಟಿನಿಂದ ಇದುವರೆಗೂ ಪರಿಹಾರ ಬಾರದೇ ನೆರೆ ಸಂತ್ರಸ್ತರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಮತ್ತೊಂದೆಡೆ, ಪ್ರತಿ ವರ್ಷ ಕೃಷ್ಣ ನದಿ ಪ್ರವಾಹಕ್ಕೆ ಹತ್ತಾರು ಗ್ರಾಮಗಳು ಸಂಪೂರ್ಣ ಮುಳುಗುತ್ತಿದ್ದು, ಈ ಊರುಗಳಿಗೆ ಶಾಶ್ವತ ನೆಲೆ ನೀಡುವಂತೆ ಸ್ಥಳೀಯ ಶಾಸಕರ ಮುಖಾಂತರ ಸರ್ಕಾರಕ್ಕೆ ಎಷ್ಟೇ ಮನವಿ ಸಲ್ಲಿಸಿದರೂ ಪುನರ್ವಸತಿ ಎಂಬುವುದು ಕಬ್ಬಿಣದ ಕಡಲೆಯಾಗಿದೆ. ಆದಷ್ಟು ಬೇಗ ಈ ಸಮಸ್ಯೆಗೆ ಸಿಎಂ ಮುಕ್ತಿ ನೀಡಲಿ ಎನ್ನುವುದು ಜನರ ಕೂಗಾಗಿದೆ.

ಯಾರು ಹಸಿವಿನಿಂದ ಬಳಲಬಾರದು ಎಂದು ಮುಖ್ಯಮಂತ್ರಿ ಅವರ ಕನಸಿನ ಯೋಜನೆಯಾದ ಇಂದಿರಾ ಕ್ಯಾಂಟೀನ್​ ಅನ್ನು ಅಥಣಿ ಪಟ್ಟಣದಲ್ಲಿ ಸ್ಥಾಪಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ. ತಾಲೂಕಿಗೆ 103 ಹಳ್ಳಿಯ ಜನರು ಸರ್ಕಾರಿ ಮತ್ತು ವಿವಿಧ ಕೆಲಸಗಳಿಗೆ ಆಗಮಿಸುತ್ತಿರುತ್ತಾರೆ. ಈ ವೇಳೆ, ದುಪ್ಪಟ್ಟು ಹಣ ನೀಡಿ ಹೋಟೆಲ್​ನಲ್ಲಿ ಆಹಾರ ಸೇವಿಸುವಂತಾಗಿದೆ. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್ ಅನ್ನು ಮುಖ್ಯಮಂತ್ರಿಯವರು ಇಲ್ಲಿ ಉದ್ಘಾಟನೆ ಮಾಡಲಿ ಎಂದು ರೈತರು ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಅತಿ ದೊಡ್ಡ ತಾಲೂಕು ಎಂದು ಖ್ಯಾತಿ ಪಡೆದಿರುವ ಅಥಣಿ, ಜಿಲ್ಲಾ ಕೇಂದ್ರದಿಂದ 190 ಕಿಲೋಮೀಟರ್ ದೂರ ಇರೋದ್ರಿಂದ ಈ ಭಾಗದ ಜನರು ಸರ್ಕಾರಿ ಕೆಲಸಕ್ಕೆ ತೆರಳಲು, ಉನ್ನತ ಮಟ್ಟದ ಚಿಕಿತ್ಸೆ ಪಡೆಯಲು ಬೆಳಗಾವಿ ನಗರಕ್ಕೆ ಹೋಗಬೇಕು. ಆಡಳಿತಾತ್ಮಕ ಸುಧಾರಣಾ ಕ್ರಮವಾಗಿ ಅಥಣಿ ಕೇಂದ್ರವನ್ನು ನೂತನ ಜಿಲ್ಲೆಯಾಗಿ ಘೋಷಣೆ ಮಾಡಬೇಕು ಎಂಬುದು ಇಲ್ಲಿನ ಜನರ ಬಹುದಿನದ ಬೇಡಿಕೆಯಾಗಿದೆ.

ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಅಥಣಿ ತಾಲೂಕಿನ 9 ಹಳ್ಳಿಗಳಿಗೆ ಇದುವರೆಗೂ ಕೃಷಿಗೆ ಸಂಬಂಧಿಸಿದ ಯಾವುದೇ ನೀರಾವರಿ ಯೋಜನೆ ರೂಪಿಸದೇ ಇಲ್ಲಿನ ರೈತರು ನೀರಿಗಾಗಿ ಸಂಕಷ್ಟ ಪಡುತ್ತಿದ್ದಾರೆ. ಕೃಷ್ಣ ನದಿ ಮಟ್ಟದಿಂದ ಎತ್ತರ ಇರುವ ರಾಮತೀರ್ಥ, ಕಕಮರಿ, ಕೊಟ್ಟಲಗಿ, ಬನ್ನೂರು, ಪಡತರವಾಡಿ , ಕನಾಳ, ತೆಲಸಂಗ್, ಕೋಹಳ್ಳಿ, ಬಾಡಗಿ ಗ್ರಾಮಗಳು ನೀರಾವರಿಯಿಂದ ವಂಚಿತವಾಗಿದೆ. ಎಲ್ಲ ಸರ್ಕಾರಗಳು ನೀರಾವರಿ ಒದಗಿಸಲಾಗುವುದು ಎಂದು ಭರವಸೆ ನೀಡುತ್ತಾ ಬಂದಿವೆ. ಅಥಣಿ ಮಾಜಿ ಶಾಸಕ ಮಹೇಶ ಕುಮಠಳ್ಳಿ ಈ ಭಾಗಕ್ಕೆ ನೀರಾವರಿ ರೂಪಿಸಲು ಅಮ್ಮಜೇಶ್ವರಿ ಏತ ನೀರಾವರಿ ಯೋಜನೆ ಸಿದ್ದಪಡಿಸಿದ್ದರು. ಕಳೆದ ಬಿಜೆಪಿ ಸರ್ಕಾರದ ಕಾಲಾವಧಿಯಲ್ಲಿ ಕೊನೆ ಗಳಿಗೆಯಲ್ಲಿ ಗೋಕಾಕ್ ನಗರದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಭೂಮಿ ಪೂಜೆ ನೆರವೇರಿಸಿದ್ದರು. ಆದರೆ, ಇದುವರೆಗೂ ಕಾರ್ಯ ರೂಪಕ್ಕೆ ಬಾರದೇ ಇರುವುದರಿಂದ ಈ ಭಾಗದ ಜನರಲ್ಲಿ ನಿರಾಸೆ ಮೂಡಿಸಿದೆ. ಆದಷ್ಟು ಬೇಗನೆ ಈ ಯೋಜನೆ ಕಾಮಗಾರಿ ಪ್ರಾರಂಭಿಸಿ, ರೈತರಿಗೆ ನೀರು ಕೊಡಬೇಕು ಎನ್ನುವುದು ಜನರ ಅಭಿಪ್ರಾಯ. ಈ ಯೋಜನೆಗೆ 1460 ಕೋಟಿ ರೂಪಾಯಿ ವೆಚ್ಚವಾಗಲಿದೆ.

ಇದನ್ನೂ ಓದಿ :Heavy Rain: ಅಥಣಿಯಲ್ಲಿ ಮನೆ ಬಿದ್ದು ಯುವಕ; ವಿಜಯನಗರದಲ್ಲಿ ಗೋಡೆ ಕುಸಿದು ವೃದ್ಧೆ ಸಾವು

ಹಾಗೆಯೇ, ಬಹು ದಿನಗಳ ಬೇಡಿಕೆಯಾದ ಅಥಣಿ ಮಾರ್ಗವಾಗಿ ಶೇಡಬಾಳ ವಿಜಯಪುರ ನೂತನ ರೈಲು ಮಾರ್ಗ, ಸಕ್ಕರೆ ಕಾರ್ಖಾನೆಗಳಲ್ಲಿ ಸರ್ಕಾರದ ವತಿಯಿಂದ ಕಬ್ಬು ತೂಗುವ ತೂಕದ ಮಷಿನ್​ (ತಕ್ಕಡಿ), ತಾಲೂಕಿನಲ್ಲಿ ಸುಗಮ ಸಂಚಾರಕ್ಕೆ ಒತ್ತು, ಅಥಣಿ ಪಟ್ಟಣವನ್ನು ನಗರ ಸಭೆಗೆ ಮಾರ್ಪಾಡು, ಇಂದಿರಾ ಕ್ಯಾಂಟೀನ್ ಸ್ಥಾಪನೆ, ಉಮಾರಾಮೇಶ್ವರ ಐತಿಹಾಸಿಕ ದೇವಾಲಯ ಪ್ರವಾಸೋದ್ಯಮವಾಗಿ ಮಾರ್ಪಾಡು ಮಾಡುವುದು, ನೀರಾವರಿ ವಂಚಿತ ಗ್ರಾಮಗಳಿಗೆ ನೀರಾವರಿ ಯೋಜನೆ ರುಪಿಸುವುದು, ಕೃಷ್ಣ ನದಿ ತೀರದ ಗ್ರಾಮಗಳಿಗೆ ಪಶು ಆಸ್ಪತ್ರೆಗಳು ಮಂಜೂರು, ಅಥಣಿ ಪಟ್ಟಣದಲ್ಲಿ ಸರ್ಕಾರಿ ಹೈಸ್ಕೂಲ್ ಮಂಜೂರು, ಉನ್ನತ ಮಟ್ಟದ ವೈದ್ಯಕೀಯ ಚಿಕಿತ್ಸೆ ಆಸ್ಪತ್ರೆ, ಅಥಣಿ ತಾಲೂಕಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ, ಎಲ್ಲ ಮೂಲಭೂತ ಸೌಕರ್ಯಗಳ ಮಂಜೂರಾತಿಗಾಗಿ ಈ ಭಾಗದ ಜನರು ಮುಖ್ಯಮಂತ್ರಿ ಆಗಮನದ ಮೇಲೆ ಕಣ್ಣಿಟ್ಟಿದ್ದಾರೆ.

Last Updated : Aug 9, 2023, 12:31 PM IST

ABOUT THE AUTHOR

...view details