ಬೆಳಗಾವಿ/ಬೆಂಗಳೂರು: ಸಹಕಾರ ಬ್ಯಾಂಕುಗಳಲ್ಲಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಅಸಲನ್ನು ಕಟ್ಟಿದರೆ ಸಂಪೂರ್ಣ ಬಡ್ಡಿಯನ್ನು ಮನ್ನಾ ಮಾಡುವ ಬಗ್ಗೆ ನಮ್ಮ ಸರ್ಕಾರ ತೀರ್ಮಾನಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ. ಸಾಲಮನ್ನಾ ಮಾಡುವ ಕುರಿತು ನಾವು ನಮ್ಮ ಪ್ರಣಾಳಿಕೆಯಲ್ಲಿ ಹೇಳಿಲ್ಲ. ಬಿಜೆಪಿಯವರು 2018ರ ತಮ್ಮ ಪ್ರಣಾಳಿಕೆಯಲ್ಲಿ "ನಮ್ಮ ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ರಾಷ್ಟ್ರೀಕೃತ ಬ್ಯಾಂಕು ಮತ್ತು ಸಹಕಾರಿ ಸಂಘಗಳಲ್ಲಿ ಇರುವ 1 ಲಕ್ಷದವರೆಗೆ ರೈತರ ಬೆಳೆ ಸಾಲ ಮನ್ನಾ ಮಾಡಲಾಗುವುದು" ಎಂದು ಹೇಳಿದ್ದರು. ಆದರೆ ಬಿಜೆಪಿಯವರು ಈ ಕುರಿತು ಏನಾದರೂ ಮಾಡಿದ್ದಾರಾ? ನಯಾಪೈಸೆ ಬಿಡುಗಡೆ ಮಾಡಿದ್ದಾರಾ ಹೇಳಿ ಎಂದು ಅವರು ಪ್ರಶ್ನಿಸಿದರು.
2019ರ ಆಗಸ್ಟ್ನಲ್ಲಿ ಅತಿವೃಷ್ಟಿಯ ಕಾರಣಕ್ಕೆ ಬೆಳೆ ಹಾನಿಯಾಗಿತ್ತು. ಆಗ ಶಿವಮೊಗ್ಗದಲ್ಲಿ ಯಡಿಯೂರಪ್ಪನವರು ಏನು ಹೇಳಿದರು ಗೊತ್ತಾ? "ಕೇಳಿದಷ್ಟು ಹಣ ಕೊಡಲು ಸರ್ಕಾರದಲ್ಲಿ ನೋಟ್ ಪ್ರಿಂಟ್ ಮಾಡುವ ಯಂತ್ರವಿಲ್ಲ" ಎಂದಿದ್ದರು. ಯಡಿಯೂರಪ್ಪನವರು ಈ ರೀತಿ ಹೇಳಿದ್ದು ಇದೇ ಮೊದಲಲ್ಲ. 2009ರಲ್ಲಿ ವಿಧಾನ ಪರಿಷತ್ತಿನಲ್ಲಿ ನಮ್ಮ ವಿರೋಧ ಪಕ್ಷದ ನಾಯಕರಾಗಿದ್ದ ವಿ.ಎಸ್.ಉಗ್ರಪ್ಪ ಮುಂತಾದ ನಮ್ಮ ಪಕ್ಷದವರು ಸಾಲ ಮನ್ನಾ ಮಾಡಿ ಎಂದು ಆಗ್ರಹಿಸಿದ್ದಾಗಲೂ ಯಡಿಯೂರಪ್ಪನವರು ಇದೇ ಮಾತುಗಳನ್ನಾಡಿದ್ದರು.
ಯಡಿಯೂರಪ್ಪನವರು ಹೇಳಿದ್ದ ಮಾತುಗಳಿವು, ಮತಕ್ಕಾಗಿ ಇತರ ಪಕ್ಷದವರು ಹೇಳಿದಂತೆ ನಾನು ಕೂಡ ರೈತರ ಕೃಷಿ ಸಾಲ ಮನ್ನಾ ಮಾಡುತ್ತೇನೆಂದು ಚುನಾವಣೆಯ ಸಂದರ್ಭದಲ್ಲಿ ಆಶ್ವಾಸನೆ ನೀಡಿದ್ದೆ. ಆದರೆ ಇದು ಸಾಧ್ಯವಿಲ್ಲ ಎಂಬುದು ಈಗ ಅರ್ಥವಾಗುತ್ತಿದೆ. ಸಾಲ ಮನ್ನಾ ಮಾಡಲು ಹಣ ಎಲ್ಲಿದೆ? ಎಂದು ವಿರೋಧ ಪಕ್ಷದ ಸದಸ್ಯರನ್ನೆ ಪ್ರಶ್ನಿಸಿದ್ದರು. ರೈತರ ಸಾಲ ಮನ್ನಾ ಮಾಡಲು ನಾನು ಸಿದ್ಧನಿದ್ದೇನೆ. ಆದರೆ ಬೊಕ್ಕಸದಲ್ಲಿ ಹಣದ ಕೊರತೆ ಇದೆ. ಆದುದರಿಂದ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ ಎಂದಿದ್ದರು. ಜೊತೆಗೆ, ವಿಧಾನಸೌಧದಲ್ಲಿ ಕೂತು ನಾನು ನೋಟ್ ಪ್ರಿಂಟ್ ಮಾಡುತ್ತಿಲ್ಲ ಎಂದು ಉತ್ತರಿಸಿದ್ದರು ಎಂದು ಪರೋಕ್ಷವಾಗಿ ಬಿಜೆಪಿಯವರಿಗೆ ಸಿಎಂ ತಿವಿದರು.
ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಹೈಪವರ್ ಕಮಿಟಿ: ನಂಜುಂಡಪ್ಪನವರ ವರದಿಯ ಅನುಷ್ಠಾನ ಹಾಗೂ ಅದರ ಫಲಶ್ರುತಿಯ ಅಧ್ಯಯನಕ್ಕೆ ನುರಿತ ಅರ್ಥಶಾಸ್ತ್ರಜ್ಞರೊಬ್ಬರ ಅಧ್ಯಕ್ಷತೆಯಲ್ಲಿ ಹೈಪವರ್ (ಉನ್ನತಾಧಿಕಾರ ಸಮಿತಿ) ಕಮಿಟಿಯನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತ ಚರ್ಚೆಗೆ ಉತ್ತರ ನೀಡಿದ ಅವರು, ನಂಜುಂಡಪ್ಪ ವರದಿ ಸಲ್ಲಿಕೆಯಾಗಿ 21 ವರ್ಷಗಳಾದವು. ಈ ವರದಿಯನ್ನಾಧರಿಸಿ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮೂಲಕ ಇದುವರೆಗೆ 61,330 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗಿದೆ. ಸುಮಾರು 42,000 ಕೋಟಿ ರೂ. ಖರ್ಚು ಮಾಡಲಾಗಿದೆ. ನಂಜುಂಡಪ್ಪನವರ ವರದಿಯನ್ನಾಧರಿಸಿ ನೀಡಲಾಗುವ ವಿಶೇಷ ಅಭಿವೃದ್ಧಿ ಯೋಜನೆಯಡಿಯೇ 32,433.43 ಕೋಟಿ ರೂ. ಖರ್ಚು ಮಾಡಲಾಗಿದೆ.