ಬೆಳಗಾವಿ:ನಮ್ಮ ನಿಲುವು ಏನೂ ಅನ್ನೋದನ್ನು ನಾಳೆ ನಗರದ ಚನ್ನಮ್ಮ ಸರ್ಕಲ್ನಲ್ಲಿ ಸಭೆ ಸೇರಲಿದ್ದು, ಅಲ್ಲಿ ನಮ್ಮ ನಿರ್ಧಾರವನ್ನು ಪ್ರಕಟಣೆ ಮಾಡುತ್ತೇವೆ ಎಂದು ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಸುವರ್ಣಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಲಿಂಗಾಯತ ಪಂಚಮಸಾಲಿ ಮೀಸಲಾತಿ ಸಂಬಂಧ ಸಿಎಂ ಜೊತೆ ಚರ್ಚೆ ನಡೆಸಿದ್ದೇವೆ. ಮೂರು ವರ್ಷಗಳ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದೇವೆ. ನೂತನ ಸರ್ಕಾರ ಬಂದ ಮೇಲೆ ಮೊದಲ ಸುತ್ತಿನ ಮಾತುಕತೆ ನಡೆಸಿ, ನಮ್ಮ ಹೋರಾಟಕ್ಕೆ ಸರ್ಕಾರ ಸ್ಪಂದಿಸಬೇಕು ಅಂತ ನಾಳೆ ಬೃಹತ್ ಹೋರಾಟ ಸಭೆಯನ್ನು ಕರೆಯಲಾಗಿದೆ. ಹೋರಾಟಕ್ಕೆ ಮಣಿದು ಸರ್ಕಾರ ಇವತ್ತು ನಮ್ಮೊಂದಿಗೆ ಸಭೆ ನಡೆಸಿದೆ ಎಂದು ಸ್ಪಷ್ಟಪಡಿಸಿದರು.
ನಾಳೆ ಎಲ್ಲ ನಮ್ಮ ಸಮುದಾಯದ ಮುಖಂಡರು ಬರಬೇಕು. ಮುಂದಿನ ಹೋರಾಟ ತೀರ್ಮಾನ ನಾಳೆ ಪ್ರಕಟಿಸುತ್ತೇವೆ. ಇವತ್ತು ಸಂಜೆ ಮತ್ತೊಂದು ಸುತ್ತಿನ ಸಭೆ ಮಾಡಿ ಸಿಎಂ ಹೇಳಿಕೆ, ನಮ್ಮ ಹೋರಾಟದ ತೀರ್ಮಾನ ಕೈಗೊಳ್ಳುವ ಬಗ್ಗೆ ನಾಳೆ ಪ್ರಕಟಣೆ ಮಾಡುತ್ತೇವೆ. ಸಿಎಂ ಜೊತೆಗೆ ನಡೆಸಿದ ಸಭೆ ವಿಷಯ ಬಗ್ಗೆ ಮಾಧ್ಯಮಗಳ ಮುಂದೆ ನಾ ಹೇಳೋಕೆ ಇಷ್ಟ ಪಡೋದಿಲ್ಲ ಎಂದು ಹೇಳಿದರು.
ಎಜಿ ಬಳಿ ಸಭೆ ಮಾಡಿ ನಿರ್ಧಾರ: ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಕಲ್ಪಿಸುವ ವಿಚಾರವಾಗಿ ಸಿಎಂ ನಡೆಸಿದ ಸಭೆಯಲ್ಲಿ ಜಯಮೃತ್ಯುಂಜಯ ಸ್ವಾಮೀಜಿ, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಸಿ.ಸಿ.ಪಾಟೀಲ್, ಅರವಿಂದ ಬೆಲ್ಲದ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕ ವಿಜಯಾನಂದ ಕಾಶಪ್ಪನವರ್ ಭಾಗಿಯಾಗಿದ್ದರು.
ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು,ಬೆಂಗಳೂರಿಗೆ ತೆರಳಿದ ನಂತರ ಅಡ್ವಕೋಟ್ ಜನರಲ್ ಮತ್ತು ಹಿಂದುಳಿದ ವರ್ಗಗಳ ಆಯೋಗದ ಜೊತೆ ಸಭೆ ಮಾಡಿ ತಿಳಿಸುತ್ತೇನೆ ಎಂದು ಪಂಚಮಸಾಲಿ ಮುಖಂಡರಿಗೆ ಭರವಸೆ ನೀಡಿದರು.